ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಗ್ರಂಥಾಲಯಕ್ಕೆ ಹೋಗಿ ಓದುವುದನ್ನು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಕಡ್ಡಾಯ ಮಾಡಬೇಕು. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಎಲ್ಲಾ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಗ್ರಂಥಾಲಯಕ್ಕೆ ಹೋಗಿ ಓದುವುದನ್ನು ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಕಡ್ಡಾಯ ಮಾಡಬೇಕು. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಎಲ್ಲಾ ಕಾಲೇಜುಗಳಿಗೆ ನಿರ್ದೇಶನ ನೀಡಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಮೂರು ದಿನಗಳಿಂದ ನಡೆದ ‘ರೀಡರ್ಸ್ ಆರ್ ಲೀಡರ್ಸ್’ ಎಂಬ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನದ ಶನಿವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರುಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಗ್ರಂಥಾಲಯದಲ್ಲಿ ಓದಬೇಕು ಎಂಬುದನ್ನು ಕಡ್ಡಾಯ ಮಾಡುವ ಕುರಿತು ತಾವು ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆಯುವುದಾಗಿ ಹೇಳಿದರು. ಈ ವಿಚಾರ ಎಲ್ಲ ಕಾಲೇಜುಗಳಲ್ಲಿ ಅತ್ಯಂತ ಗಂಭೀರವಾಗಿ, ಕಾಳಜಿಯಿಂದ ಆಗಬೇಕು. ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿ ಬೆಳೆಸಲು ಅವರು ಗ್ರಂಥಾಲಯಕ್ಕೆ ಹೋಗಿ ಓದುವುದನ್ನು ಖಾತರಿಪಡಿಸಲು ವಿದ್ಯಾರ್ಥಿಗಳ ಸಹಿ ಪಡೆಯಬೇಕು. ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರೂ ಗ್ರಂಥಾಲಯದಲ್ಲಿ ಕುಳಿತು ಓದಬೇಕು, ಆ ಮೂಲಕ ಅವರು ವಿದ್ಯಾರ್ಥಿಗಳಲ್ಲಿ ಓದುವಿನ ಪ್ರೇರಣೆ ತುಂಬಬೇಕು ಎಂದು ಹೇಳಿದರು.
ಶಾಲೆ ಹಾಗೂ ಕಾಲೇಜುಗಳ ಗ್ರಂಥಾಲಯ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಬರುವ ೬ರಿಂದ ಆರಂಭವಾಗುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ವಿಧಾನಪರಿಷತ್ ಸದಸ್ಯರೊಬ್ಬರ ಮೂಲಕ ನೋಟೀಸ್ ಕಳಿಸುವ ವ್ಯವಸ್ಥೆ ಮಾಡಿದರೆ ತಾವು ಚರ್ಚೆಗೆ ಅನುಮತಿ ನೀಡುವುದಾಗಿ ಬಸವರಾಜ ಹೊರಟ್ಟಿ ಗ್ರಂಥಪಾಲಕರಿಗೆ ತಿಳಿಸಿದರು. ಮೂರು ದಿನ ನಡೆದ ಸಮ್ಮೇಳನದ ನಿರ್ಣಯಗಳು, ಗ್ರಂಥಾಲಯ ಬೆಳವಣಿಗೆ, ಓದುವ ಹವ್ಯಾಸ ಬೆಳೆಸುವ ಸಂಬಂಧ ವ್ಯಕ್ತವಾದ ಅಭಿಪ್ರಾಯಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಸರ್ಕಾರದಿಂದ ಮಾಡಬಹುದಾದುದನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಓದುವುದರಿಂದ ಚಿಂತನೆ, ಆಲೋಚನಾ ಶಕ್ತಿ ಬೆಳೆಯುತ್ತದೆ. ಈಗಿನ ಮಕ್ಕಳಿಗೆ ನಾವು ಚಿಂತನೆ ಮಾಡುವ ಅವಕಾಶ ಎಷ್ಟು ಕಲ್ಪಿಸುತ್ತಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ಓದುವ ಮನಸ್ಥಿತಿ ಬೆಳೆಸಬೇಕು. ಮನೆ, ಶಾಲೆಗಳಿಂದಲೇ ಓದುವ ಆಸಕ್ತಿ ಬೆಳೆಯಬೇಕು. ಪುಸ್ತಕ ಓದುವ ಮೂಲಕ ಮಕ್ಕಳಲ್ಲಿ ನಾಯಕತ್ವಗುಣ ಬೆಳೆಸಬೇಕು ಎಂದು ಹೇಳಿದರು.ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಾತನಾಡಿ, ಗ್ರಂಥಾಲಯಕ್ಕೆ ಹೋಗಲು ಮಕ್ಕಳಿಗೆ ಪ್ರಚೋದನೆ ನೀಡಬೇಕು. ಗ್ರಂಥಾಲಯವೆಂದರೆ ಕೇವಲ ಪುಸ್ತಕ ಸಂಗ್ರಹಾಲಯವಲ್ಲ, ಜೀವನ ಮಾರ್ಗದರ್ಶಕ ಕೇಂದ್ರ. ಗ್ರಂಥಾಲಯ ಮಹತ್ವದ ಬಗ್ಗೆ ಶಿಕ್ಷಕರಿಗೂ ಶಿಕ್ಷಣ ನೀಡಬೇಕಾಗಿದೆ. ಶಿಕ್ಷಕರು ತಾವೂ ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದೊಯ್ದು ಓದಿಸಬೇಕು ಎಂದು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಕಿ ಜಿ.ಶೋಭಾ ಮಾತನಾಡಿ, ಪುಸ್ತಕ ಓದು ನಾಯಕತ್ವವನ್ನು ರೂಪಿಸುತ್ತದೆ. ಆದರ್ಶ ಗುಣ ಬೆಳೆಸುತ್ತದೆ. ೨೭ ವರ್ಷ ಜೈಲಿನಲ್ಲಿದ್ದ, ಅಲ್ಲಿ ಪುಸ್ತಕಗಳನ್ನು ಓದಿದ ನೆಲ್ಸನ್ ಮಂಡೇಲ ಕೋಪ, ಸಿಟ್ಟು, ಆಕ್ರೋಶ ಬಿಟ್ಟು ಆದರ್ಶ ಗುಣದ ನಾಯಕನಾಗಿ ಹೊರಹೊಮ್ಮಿದ. ಡಾ.ಅಬ್ದುಲ್ ಕಲಾಂ, ಗಾಂಧೀಜಿ, ಅಂಬೇಡ್ಕರ್ ಅವರು ಮಹನೀಯರಾಗಲು ಅವರ ಪುಸ್ತಕ ಓದುವೇ ಕಾರಣ. ಓದು ಮನುಷ್ಯನನ್ನು ಪರಿವರ್ತನೆಗೊಳಿಸುತ್ತದೆ ಎಂದರು. ಸಭಾಪತಿ ಬಸವರಾಜ ಹೊರಟ್ಟಿಯವರು ಸೂಚಿಸಿದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಓದುವುದನ್ನು ಕಡ್ಡಾಯಗೊಳಿಸುವ ಕುರಿತು ಆಯುಕ್ತರ ಜೊತೆ ಚರ್ಚೆ ನಡೆಸಿ ಜಾರಿಗೊಳಿಸುವ ಭರವಸೆ ನೀಡಿದರು.ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ, ವಿಟಿಯು ಒಕ್ಕೂಟ ಸಲಹೆಗಾರ ಪ್ರೊ.ಮುತ್ತಯ್ಯ ಕೊಗನೂರುಮಠ, ಎಸ್‌ಐಟಿ ಕಾಲೇಜು ಪ್ರಾಂಶುಪಾಲರಾದ ಡಾ.ದಿನೇಶ್, ಎಲ್‌ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರು, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ.ಎಂ.ಕೃಷ್ಣಪ್ಪ, ಕಾರ್ಯಾಧ್ಯಕ್ಷ ಡಾ.ರಾಜೇಶ್ ಎನ್.ತುರಮರಿ, ರಾಜ್ಯ ಗ್ರಂಥಾಲಯ ಸಂಘದ ಕಾರ್ಯದರ್ಶಿ ಹೆಚ್.ಪಿ.ಶೇಖರ್ ಮೊದಲಾದವರು ಭಾಗವಹಿಸಿದ್ದರು.