ಒಳ್ಳೆಯ ಕೆಲಸಗಳನ್ನು ಮಾಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ: ಡಾ.ಎನ್ .ಕೆ.ಲೋಕನಾಥ್

| Published : Aug 25 2024, 01:59 AM IST

ಒಳ್ಳೆಯ ಕೆಲಸಗಳನ್ನು ಮಾಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ: ಡಾ.ಎನ್ .ಕೆ.ಲೋಕನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಒಳ್ಳೆಯ ಮಾತು ದ್ವೇಷವನ್ನು ದೂರ ಮಾಡುತ್ತದೆ. ಒಳ್ಳೆಯ ಮನಸ್ಸು ಸಂಬಂಧವನ್ನು ಗಟ್ಟಿಗೊಳಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ. ಪದವಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಸನ್ನು ಕಾಣಬೇಕು. ಜೊತೆಗೆ ಅದನ್ನು ಸಾಕಾರಗೊಳಿಸುವತ್ತ ಕಷ್ಟಪಟ್ಟು ಪರಿಶ್ರಮ ಪಡಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳನ್ನು ಕೇವಲ ಪದವಿ ಪಡೆದರಷ್ಟೆ ಸಾಲದು. ಭವಿಷ್ಯದಲ್ಲಿ ಒಳ್ಳೆಯ ಕೆಲಸ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಎನ್ .ಕೆ.ಲೋಕನಾಥ್ ತಿಳಿಸಿದರು.

ತಾಲೂಕಿನ ಸುಂಡಹಳ್ಳಿಯಲ್ಲಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಿಂದ ಕಾಲೇಜು ಆವರಣದಲ್ಲಿ ನಡೆದ 7ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಮಾತು ದ್ವೇಷವನ್ನು ದೂರ ಮಾಡುತ್ತದೆ. ಒಳ್ಳೆಯ ಮನಸ್ಸು ಸಂಬಂಧವನ್ನು ಗಟ್ಟಿಗೊಳಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಒಳ್ಳೆಯ ವ್ಯಕ್ತಿತ್ವ ಜೀವನವನ್ನೇ ಬದಲಾಯಿಸುತ್ತದೆ ಎಂದರು.

ಪದವಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಸನ್ನು ಕಾಣಬೇಕು. ಜೊತೆಗೆ ಅದನ್ನು ಸಾಕಾರಗೊಳಿಸುವತ್ತ ಕಷ್ಟಪಟ್ಟು ಪರಿಶ್ರಮ ಪಡಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಸಂಸ್ಥೆ ಅಧ್ಯಕ್ಷ ಡಾ.ಎಚ್.ರಾಜು ಮಾತನಾಡಿ, ಉನ್ನತ ಉದ್ಯೋಗ ಪಡೆದವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಅವಕಾಶ ಸಿಗದಿದ್ದರೆ ಹತಾಶರಾಗದೆ ಮತ್ತೊಂದು ಅವಕಾಶಕ್ಕೆ ಪ್ರಯತ್ನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ನಡೆದಷ್ಟು ದಾರಿ, ಅವಕಾಶಗಳು ಇದೆ. ಪಡೆದಷ್ಟು ಭಾಗ್ಯ ಇದೆ ಎನ್ನುವಂತೆ ಎಲ್ಲಿಯವರೆಗೆ ನಮ್ಮ ಪರಿಶ್ರಮ ಇರುತ್ತೋ ಅಲ್ಲಿಯವರೆಗೆ ನಡೆಯಲು ಸಾಧ್ಯ. ಶೈಕ್ಷಣಿಕವಾಗಿ ಪದವಿ ಪ್ರಮಾಣ ಪತ್ರ ಬೇಕೆಂದಾದರೂ, ಅದರಾಚೆಗೂ ಬಹಳಷ್ಟು ಅವಕಾಶಗಳನ್ನು ಪಡೆದುಕೊಳ್ಳುವುದು ಮುಖ್ಯ ಎಂದು ಪ್ರತಿಪಾದಿಸಿದರು.

ಸಂಸ್ಥೆ ಕಾರ್‍ಯದರ್ಶಿ ಪ್ರೊ. ನಾಗೇಂದ್ರ ಮಾತನಾಡಿ, ಕೆಲಸ ಸಿಕ್ಕಿದೆ ಎಂದು ಖುಷಿಯಿಂದ ಇರಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಯುವಗದಲ್ಲಿ ಜ್ಞಾನ, ಭಾಷೆ, ಕೌಶಲ್ಯವನ್ನು ವೃದ್ಧಿಪಡಿಸಿಕೊಳ್ಳದಿದ್ದರೆ ಉಳಿದುಕೊಳ್ಳುವುದು ಕಷ್ಟಸಾಧ್ಯ ಎಂದರು.

ಕಂಪನಿಗಳಲ್ಲಿ ಒಳ್ಳೆಯ ಜ್ಞಾನ, ಕೌಶಲ್ಯ ವೃದ್ಧಿಸಿಕೊಳ್ಳದಿದ್ದರೆ ಕೆಲಸ ಮಾಡಲು ಆಗದು. ಕೆಲವರಿಗೆ ಇನ್ನೂ ಕೆಲಸ ಸಿಕ್ಕಿಲ್ಲ. ಆದರೂ ಭಯಪಡುವ ಅಗತ್ಯವಿಲ್ಲ. ನಿಮ್ಮ ವಿಷಯಗಳ ಬಗ್ಗೆ ಪರಿಪೂರ್ಣವಾಗಿ ತಿಳಿಯುವುದರ ಜೊತೆಗೆ ಕೌಶಲ್ಯ ಮತ್ತು ಭಾಷಾಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಇದರಿಂದ ಅವಕಾಶಗಳು ಲಭಿಸುತ್ತವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಕಂಠಪ್ಪ, ಉಪ ಪ್ರಾಂಶುಪಾಲ ಮಂಜುನಾಥ್ ಇತರರು ಭಾಗವಹಿಸಿದ್ದರು.