ಸಾರಾಂಶ
ಮೈಕ್ರೋ ಫೈನಾನ್ಸ್ ನ ಸಮಸ್ಯೆಗಳನ್ನು ತಡವಾಗಿಯಾದರೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸುಗ್ರೀವಾಜ್ಞೆ ಹೊರಡಿಸಿದ್ದು ಸ್ವಾಗತಾರ್ಹವಾಗಿದ್ದು, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಆರು ತಿಂಗಳ ಹಿಂದೆ ರಾಜ್ಯದಲ್ಲಿ ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಮಾಡಿ ಸಲ್ಲಿಸಿದ್ದ ದೂರು ಫಲಪ್ರದವಾಗಿದ್ದು ಇದರ ಶ್ರೇಯ ಕನಕಪುರದ ಎಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನತೆಗೆ ಸಲ್ಲಬೇಕಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ಕೇಂದ್ರ ಸರಕಾರವು ನಬಾರ್ಡ್ ಮೂಲಕ ರೈತರಿಗೆ ನೀಡಲಾಗುತ್ತಿದ್ದ ಸಾಲದ ಹಣವನ್ನು ಕಡಿತಗೊಳಿಸಿರುವ ಪರಿಣಾಮ ರೈತರು ಅನಿವಾರ್ಯವಾಗಿ ಖಾಸಗಿ ಮೈಕ್ರೋ ಫೈನಾನ್ಸ್ ಗಳ ಮುಂದೆ ಕೈ ಚಾಚುವಂತಾಗಿದೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಆರೋಪಿಸಿದ್ದಾರೆ.ಕನಕಪುರದ ರಾಜಾರಾವ್ ರಸ್ತೆಯಲ್ಲಿನ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಧಿಕ ಬಡ್ಡಿ, ನ್ಯಾಯ ಸಮ್ಮತವಲ್ಲದ ಫೈನಾನ್ಸ್ ನವರ ನಡುವಳಿಕೆಗಳಿಗೆ ಬಲಿಯಾಗುತ್ತಿದ್ದಾರೆ, ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಯೋಜನೆಗಳೂ ಸಹ ಬಡವರು, ರೈತರ ಸಾಮರ್ಥ್ಯವನ್ನು ವೃದ್ಧಿಸುತ್ತಿಲ್ಲ, ಮೈಕ್ರೋ ಫೈನಾನ್ಸ್ ಎಂಬುದು ಕಪ್ಪು ಹಣವನ್ನು ಬಿಳುಪಾಗಿಸುವ ಒಂದು ಕಾರ್ಖಾನೆಯಂತಾಗಿದೆ ಎಂದು ಆರೋಪಿಸಿದರು.
ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಮೈಕ್ರೋ ಫೈನಾನ್ಸ್ ನ ಸಮಸ್ಯೆಗಳನ್ನು ತಡವಾಗಿಯಾದರೂ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸುಗ್ರೀವಾಜ್ಞೆ ಹೊರಡಿಸಿದ್ದು ಸ್ವಾಗತಾರ್ಹವಾಗಿದ್ದು, ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಳೆದ ಆರು ತಿಂಗಳ ಹಿಂದೆ ರಾಜ್ಯದಲ್ಲಿ ಮೊದಲ ಬಾರಿಗೆ ಬೀದಿಗಿಳಿದು ಹೋರಾಟ ಮಾಡಿ ಸಲ್ಲಿಸಿದ್ದ ದೂರು ಫಲಪ್ರದವಾಗಿದ್ದು ಇದರ ಶ್ರೇಯ ಕನಕಪುರದ ಎಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನತೆಗೆ ಸಲ್ಲಬೇಕಿದೆ ಎಂದರು.ನಮ್ಮ ಸಂಘಟನೆಯು ಇಷ್ಟಕ್ಕೆ ಸಮಾಧಾನವಾಗಿ ಕೂರದೇ ಮೈಕ್ರೋ ಫೈನಾನ್ಸ್ ನವರ ಹಾವಳಿಗೆ ಹೆದರಿ ಊರು ಬಿಟ್ಟು ಓಡಿ ಹೋಗಿದ್ದವರನ್ನು ಮರಳಿ ಕರೆಸಿ ಗ್ರಾಮದಲ್ಲಿ ನೆಮ್ಮದಿಯಿಂದ ಬದುಕುವ ವ್ಯವಸ್ಥೆ ಮಾಡಿಕೊಡುವತ್ತ ಶ್ರಮಿಸಬೇಕಿದ್ದು, ಮುಂದೆ ಯಾರಿಗೆ ತೊಂದರೆಯಾದರೂ ಪೊಲೀಸರಿಗೆ ದೂರು ನೀಡಿ, ಅವರು ನಿರ್ಲಕ್ಷ್ಯ ವಹಿಸಿದರೆ, ನಮ್ಮ ಸಂಘಟನೆಗಳ ಗಮನಕ್ಕೆ ತನ್ನಿ, ನಾವು ನಿಮ್ಮ ಹಿತ ಕಾಯಲು ಸಿದ್ಧರಿದ್ದೇವೆ ಎಂದು ಜನರಿಗೆ ಕರೆ ನೀಡಿದರು.
ಕೆ ಆರ್ ಎಸ್ ಪಕ್ಷದ ಮುಖಂಡ ಪ್ರಶಾಂತ್ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಸ್ವಯಂ ಆದಾಯಕ್ಕೆ ಸಾಲ ನೀಡಿ, ಅವರಿಗೆ ಆರ್ಥಿಕ ಚೈತನ್ಯ ತುಂಬುವ ಉದ್ದೇಶದಿಂದ ಕಾರ್ಯ ನಿರ್ವಹಿಸಬೇಕಾದ ಮೈಕ್ರೋ ಫೈನಾನ್ಸ್ ಗಳು, ತಮ್ಮಲ್ಲಿನ ಹಣವನ್ನು ದ್ವಿಗುಣ ಗೊಳಿಸುವ ಲಾಲಸೆಯಿಂದ ನಿಯಮಾವಳಿ ಮೀರಿ ಜನರಿಗೆ ಸಾಲಗಳನ್ನು ನೀಡುತ್ತಿದ್ದು, ಇದೇ ಜನರ ಪಾಲಿಗೆ ಶೂಲ ವಾಗುತ್ತಿದೆ, ಸಾಲಗಾರರು ಅಸಹಾಯಕ ಸ್ಥಿತಿಗೆತಲುಪಿದರೆ ರಿಸರ್ವ್ ಬ್ಯಾಂಕ್ ನ ಮಾನೋಟೋರಿಯಂ,ಸಾಲಮನ್ನಾ ಬಡ್ಡಿ ಮನ್ನಾ ಅಥವಾ ಸಾಲದ ಮೊತ್ತ ಕಡಿತಕ್ಕೆ ಅವಕಾಶ ವಿದ್ದರೂ ಅದನ್ನು ಜಾರಿಗೊಳಿಸುತ್ತಿಲ್ಲ, ತನ್ನ ನೀತಿಯಲ್ಲಿ ಕಾನೂನುಬದ್ದ ಮಾನವೀಯತೆಗಳನ್ನು ಮೈಗೂಡಿಸಿಕೊಂಡು ಕೆಲಸ ನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.