ರಾಮನಗರ: ಚನ್ನಪಟ್ಟಣ ತಾಲೂಕು ಹುಣಸನಹಳ್ಳಿ ಗ್ರಾಮದ ಶ್ರೀ ಬಿಸಲಮ್ಮ ದೇವಸ್ಥಾನದ ಅಗ್ನಿಕೊಂಡ ಮತ್ತು ಸಿಡಿ ಜಾತ್ರಾ ಮಹೋತ್ಸವ ಮಾರ್ಚ್ 5ರಿಂದ ಮಾರ್ಚ್ 12ರವರೆಗೆ ನಡೆಯಲಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ ಸೂಚನೆ ನೀಡಿದರು.

ನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿಯ ಶ್ರೀ ಬಿಸಲಮ್ಮ ದೇವಸ್ಥಾನದ 2026ನೇ ಸಾಲಿನ ವಾರ್ಷಿಕ ಅಗ್ನಿಕೊಂಡ ಮತ್ತು ಸಿಡಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರಾ ಕಾಲದಲ್ಲಿ ಸೇರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಹಾಗೂ ಜಾತ್ರಾ ದಿನಗಳಂದು ಮತ್ತು ಅಗ್ನಿಕೊಂಡ, ಸಿಡಿ ದಿನಗಳಂದು ಹೆಚ್ಚುವರಿ ಆರಕ್ಷಕ ಸಿಬ್ಬಂದಿಗಳನ್ನು ದೇವಸ್ಥಾನಕ್ಕೆ ನಿಯೋಜಿಸಬೇಕು. ಜಾತ್ರೆಗೆ ಹೆಚ್ಚಿನ ಜನಸಂದಣಿ ಸೇರುವ ನಿರೀಕ್ಷೆಯಿದ್ದು, ನೂಕುನುಗ್ಗಲು ಉಂಟಾಗದಂತೆ ಜನರು ಸರದಿಯಲ್ಲಿ ಹೋಗಲು ಅನುವು ಮಾಡಿಕೊಟ್ಟು ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್ ವ್ಯವಸ್ಥೆ ಹಾಗೂ ಬಿಗಿಬಂದೋಬಸ್ತ್ ಮಾಡಬೇಕು ಎಂದರು.

ಜಾತ್ರಾಕಾಲದ ದಿನಗಳಲ್ಲಿ ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಬೇಕು. ಅಗ್ನಿಕೊಂಡದ ದಿನದಂದು ಸುಸಜ್ಜಿತ ಅಗ್ನಿಶಾಮಕ ವಾಹನದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಜಾತ್ರಾ ಮೈದಾನದಲ್ಲಿ ಒಣಗಿರುವ ಮರದ ಕೊಂಬೆಗಳನ್ನು ತೆರವುಗೊಳಿಸಬೇಕು. ಜಾತ್ರಾ ಮೈದಾನದಲ್ಲಿ ಪ್ರಸಾದ ವಿತರಣೆಯ ಮತ್ತು ಅನ್ನದಾನ ನಡೆಯುವ ಸ್ಥಳದಲ್ಲಿ ಸುರಕ್ಷತೆ ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ, ಜಾಗೃತಿ ಮೂಡಿಸುವಂತೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೆ ಹಾಗೂ ಅಗ್ನಿಕೊಂಡ ಮತ್ತು ಸಿಡಿ ದಿನಗಳಂದು ತಾತ್ಕಾಲಿಕ ವೈದ್ಯಕೀಯ ಶಿಬಿರ ಮತ್ತು 108 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಾತ್ರಾ ಪ್ರಯುಕ್ತ ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚನ್ನಪಟ್ಟಣ ಹಾಗೂ ಕೋಡಂಬಳ್ಳಿಯಿಂದ ಜಾತ್ರಾ ಪ್ರಯುಕ್ತ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಚನ್ನಪಟ್ಟಣದ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಾತ್ರಾ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿರುವ ಹೈಮಾಸ್ಟ್ ವಿದ್ಯುತ್ ದೀಪ ಮತ್ತು ಬೀದಿ ದೀಪಗಳನ್ನು ದುರಸ್ಥಿ ಮತ್ತು ಕುಡಿಯುವ ನೀರು, ಜಾತ್ರಾ ಮೈದಾನ ಸ್ವಚ್ಚತೆ ಕಾಪಾಡುವಂತೆ ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಸಲಮ್ಮ ದೇವಸ್ಥಾನದ ವತಿಯಿಂದ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕ ಭಕ್ತಾದಿಗಳಿಗೆ ಮೊಬೈಲ್ ಶೌಚಾಲಯದ ವ್ಯವಸ್ಥೆ, ಜಾತ್ರಾ ಪ್ರಯುಕ್ತ ಅರಿವು ಮೂಡಿಸುವ ವಿವಿಧ ಸೂಚನಾ ಫಲಕಗಳಳನ್ನು ಅಳವಡಿಸಬೇಕು. ಜಾತ್ರಾ ಪ್ರಯುಕ್ತ ದೇವಸ್ಥಾನಕ್ಕೆ ಮತ್ತು ಜಾತ್ರಾ ಮೈದಾನಕ್ಕೆ ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಬೇಕು ಎಂದು ಚಂದ್ರಯ್ಯ ಹೇಳಿದರು.


ಚನ್ನಪಟ್ಟಣ ತಾಲೂಕಿನ ತಹಸೀಲ್ದಾರ್ ಬಿ.ಎನ್. ಗಿರೀಶ್, ವೃತ್ತ ನಿರೀಕ್ಷಕ ಪ್ರಕಾಶ್, ಶ್ರೀ ಬಿಸಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎಸ್.ಎನ್.ಶಂಕರ್ ಮೂರ್ತಿ , ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ತಹಶೀಲ್ದಾರ್ ರಮ್ಯಾ, ಶ್ರೀ ಬಿಸಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಘು ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

24ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮದ ಶ್ರೀ ಬಿಸಲಮ್ಮ ದೇವಸ್ಥಾನದ 2026ನೇ ಸಾಲಿನ ವಾರ್ಷಿಕ ಅಗ್ನಿಕೊಂಡ ಮತ್ತು ಸಿಡಿ ಜಾತ್ರಾ ಮಹೋತ್ಸವ ಕಾಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.