ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ
ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ನಡೆಯಲಿರುವ ಕೆಂಪೇಗೌಡ, ಡಾ.ಫ.ಗು.ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣ, ಈ ಮೂವರು ಮಹನೀಯರ ಜಯಂತಿ ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಂಪೇಗೌಡ, ಡಾ.ಫ.ಗು.ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಾ.ಫ.ಗು.ಹಳಕಟ್ಟಿ ಜಯಂತಿ:ಜಿಲ್ಲಾ ಮಟ್ಟದಲ್ಲಿ ಡಾ.ಫ.ಗು.ಹಳಕಟ್ಟಿ ಜಯಂತಿಯನ್ನು ಜು.2 ರಂದು ಹಮ್ಮಿಕೊಳ್ಳಲಾಗುವುದು. ಅಂದು ಬೆಳಗ್ಗೆ 10.30 ಗಂಟೆಗೆ ಕೊಪ್ಪಳ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ವೇದಿಕೆ ಸಮಾರಂಭದಲ್ಲಿ ಡಾ.ಫ.ಗು ಹಳಕಟ್ಟಿ ಭಾವಚಿತ್ರಕ್ಕೆ ಪೂಜೆ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿವೆ. ಈ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕುಷ್ಟಗಿ ರಸ್ತೆಯಲ್ಲಿರುವ ಡಾ.ಫ.ಗು ಹಳಕಟ್ಟಿ ವೃತ್ತದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.
ಹಡಪದ ಅಪ್ಪಣ್ಣ ಜಯಂತಿ:ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆಯನ್ನು ಜು.29 ಆಯೋಜಿಸಲಾಗುವುದು. ಅಂದು ಬೆಳಗ್ಗೆ 8.30ಕ್ಕೆ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆಯು ನಗರದ ಗಡಿಯಾರ ಕಂಬದ ಹತ್ತಿರವಿರುವ ಅಕ್ಕಮಹಾದೇವಿ ದೇವಸ್ಥಾನದ ಆವರಣದಿಂದ ಆರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಲಿದೆ. ಬಳಿಕ 10.30 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪೂಜೆ, ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ಹಾಗೂ ಇತರೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.ಡಾ. ಫ.ಗು. ಹಳಕಟ್ಟಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿ ಸಮಾರಂಭಗಳ ದಿನದಂದು ಕಾರ್ಯಕ್ರಮ ನಡೆಯುವ ಸ್ಥಳ, ಡಾ. ಫ.ಗು ಹಳಕಟ್ಟಿ ವೃತ್ತ ಮತ್ತು ಹಡಪದ ಅಪ್ಪಣ್ಣನವರ ಮೆರವಣಿಗೆ ಸಾಗಿ ಬರುವ ರಸ್ತೆ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮೆರವಣಿಗೆಯಲ್ಲಿ ಹಾಗೂ ವೇದಿಕೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಜನರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಯಂತಿ ದಿನದಂದು ಜಿಲ್ಲೆಯ ಎಲ್ಲ ಶಾಲಾ ಕಾಲೇಜು, ಗ್ರಾಪಂ ಮತ್ತು ಇತರೆ ಕಚೇರಿಗಳಲ್ಲಿ ಈ ಮಹನೀಯರ ಜಯಂತಿ ಆಚರಿಸುವಂತಾಗಬೇಕು. ಜಿಲ್ಲಾ ಮಟ್ಟದ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೆಂಪೇಗೌಡ ಜಯಂತಿಯನ್ನು ಜೂ.27ರಂದು ಸರಳವಾಗಿ ಆಚರಿಸುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.ಅಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅವರಿಗೆ ಗೌರವ ನಮನ ಸಲ್ಲಿಸಬೇಕು. ಈ ಕಾರ್ಯಕ್ರಮಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದರು.ಮಹನೀಯರ ಜಯಂತಿ ಕಾರ್ಯಕ್ರಮಗಳ ಯಶಸ್ವಿಗೆ ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ಬಸವ ಅನುಯಾಯಿ ಬಸವರಾಜ ಬಳ್ಳೊಳ್ಳಿ, ಬಸವಶ್ರೀ ಬಿ.ಸೋಮನಾಳ, ಹನುಮೇಶ ಕಲ್ಮಗಿ, ಮಹಾಂತೇಶ ಮಲ್ಲನಗೌಡ್ರು, ವೀರಣ್ಣ, ಸತೀಶ್ ಮಂಗಳೂರು, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಮೌನೇಶ್, ಉಪಾಧ್ಯಕ್ಷ ಫಕೀರಪ್ಪ, ಗೌರವಾಧ್ಯಕ್ಷ ಮಂಜುನಾಥ ಹಾಂದ್ರಾಳ, ದ್ಯಾಮಣ್ಣ, ಫಕೀರೇಶ ಹಾಂದ್ರಾಳ, ಬಸವರಾಜ ಇಟ್ಟಗಿ, ಮುತ್ತಣ್ಣ ಮಾದನೂರು, ಗಣೇಶ್ ಹಂಚಿನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರ, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.