ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ, ಕಾರವಾರದಲ್ಲಿ ಸಿದ್ಧತೆ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪರೀಕ್ಷೆ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚಿಸಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪರೀಕ್ಷೆ ಕುರಿತು ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿತೀಯ ಪಿಯು ಪರೀಕ್ಷೆಗಳು ಫೆ. 28ರಿಂದ ಮಾ. 17ರ ವರೆಗೆ ಜಿಲ್ಲೆಯ 35 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಬಾರಿಯ ಜಿಲ್ಲೆಯಲ್ಲಿ 5939 ಬಾಲಕರು ಮತ್ತು 8545 ಬಾಲಕಿಯರು ಸೇರಿದಂತೆ ಒಟ್ಟು 14,484 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು, ಸಂಪೂರ್ಣ ಜವಾಬ್ದಾರಿ ಹೊಂದಿದ್ದು, ನಿಯಮಗಳಲ್ಲಿ ಸೂಚಿಸಿರುವಂತೆ ಯಾವುದೇ ಲೋಪವಾಗದಂತೆ ಪರೀಕ್ಷೆಗಳನ್ನು ನಡೆಸಬೇಕು. ಜಿಲ್ಲೆಯಲ್ಲಿನ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಲ್ಲಿ, ಕಟ್ಟೆಚ್ಚರವಹಿಸಬೇಕು. ಪರೀಕ್ಷಾ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಆಸನಗಳ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಮತ್ತು ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದರು.

ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್ ಅಥವಾ ಇತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಗಳಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಿವಿಗೊಡಬಾರದು. ಇಂತಹ ವದಂತಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪೊಲೀಸ್ ಭದ್ರತೆಯಲ್ಲಿ, ಜಿಪಿಎಸ್ ಅಳವಡಿಸಿದ ವಾಹನಗಳ ಮೂಲಕ ಪರೀಕ್ಷೆ ಕೇಂದ್ರಗಳಿಗೆ ತಲುಪಿಸಲು ಹಾಗೂ ಎಲ್ಲ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

ಪ್ರಾಧಿಕಾರದ ಮಾರ್ಗಸೂಚಿಯಂತೆ ಪರೀಕ್ಷೆಗಳನ್ನು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಸಬೇಕು ಹಾಗೂ ವೆಬ್ ಕಾಸ್ಟಿಂಗ್ ನಿರ್ವಹಣೆಗೆ ಮಾಡಬೇಕು. ಪರೀಕ್ಷೆ ಕೊಠಡಿಯೊಳಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನಗಳು, ಬ್ಲೂಟೂತ್ ಸಾಧನ ಅನುಮತಿಸಲಾಗುವುದಿಲ್ಲ. ಸಿಬ್ಬಂದಿ ಮೊಬೈಲ್ ಬಳಕೆಗೂ ಅವಕಾಶವಿಲ್ಲ, ಫೋಟೋಗ್ರಾಫಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದರು.

ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ್ ನಾಯ್ಕ ಹಾಗೂ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ಇದ್ದರು.