ಕನ್ನಡಪ್ರಭ ವಾರ್ತೆ ಬಾಗಲಕೋಟೆ ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಗಳಿಂದ ಪಾವತಿಸಬೇಕಾದ ಹೆಚ್ಚುವರಿ ₹ 50 ದರದ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಪಾವತಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಸಕ್ಕರೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಬ್ಬು ಪೂರೈಸಿದ ರೈತರಿಗೆ ಕಾರ್ಖಾನೆಗಳಿಂದ ಪಾವತಿಸಬೇಕಾದ ಹೆಚ್ಚುವರಿ ₹ 50 ದರದ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಪಾವತಿಸುವಂತೆ ಜಿಲ್ಲಾಧಿಕಾರಿ ಸಂಗಪ್ಪ ಸಕ್ಕರೆ ಕಾರ್ಖಾನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರೊಂದಿಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಾದಾಮಿ ಶುಗರ್ಸ್, ಜೆಮ್ ಶುಗರ್ಸ್, ಜಮಖಂಡಿ ಶುಗರ್ಸ್, ಎಂ.ಆರ್.ಎನ್ ಕೇನ್ ಪವರ್ ಲಿಮಿಟೆಡ್, ನಿರಾಣಿ ಶುಗರ್ಸ್, ಪ್ರಭುಲಿಂಗೇಶ್ವರ ಶುಗರ್ಸ್, ಕೇದಾರನಾಥ ಶುಗರ್ಸ್ ಹಾಗೂ ಸಾಯಿಪ್ರಿಯಾ ಶುಗರ್ಸ್‌ನವರು ಪ್ರತಿ ಮೆಟ್ರಿಕ್ ಟನ್‌ಗೆ ಹೆಚ್ಚುವರಿಯಾಗಿ ನೀಡಬೇಕಾದ ₹ 50 ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಅದರ ಪಾವತಿಗೆ ಕ್ರಮವಹಿಸುವಂತೆ ಸೂಚಿಸಿದರು.ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ವಿಳಂಬ ಮಾಡದೇ ತ್ವರಿತವಾಗಿ ಪಾವತಿಸಬೇಕು. ಸರ್ಕಾರದಿಂದ ಬಿಡುಗಡೆಯಾದ ₹ 50 ಸಹಾಯಧನವನ್ನು ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಪಾವತಿಸಿದ್ದೀರಿ. ಆದರೆ, ಕಾರ್ಖಾನೆಯಿಂದ ನೀಡಬೇಕಾದ ಹೆಚ್ಚುವರಿ ₹ 50 ಹಣವನ್ನು 6 ಕಾರ್ಖಾನೆಗಳು ಮಾತ್ರ ಸಂಪೂರ್ಣ ಪಾವತಿ ಮಾಡಿವೆ. ಅವರಿಗೆ ಅಭಿನಂಧನೆಗಳನ್ನು ತಿಳಿಸಿದ ಜಿಲ್ಲಾಧಿಕಾರಿಗಳು ಬರುವ ಕಬ್ಬು ನುರಿಸುವ ಹಂಗಾಮಿನಲ್ಲಿ ರೈತರಿಗೆ ಯಾವುದೇ ಗೊಂದಲ ಉಂಟಾಗದಂತೆ, ಪ್ರತಿಯೊಂದು ಸಕ್ಕರೆ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆ ಕರೆದು ಕಬ್ಬಿನ ದರವನ್ನು ನಿಗದಿಪಡಿಸಿದ ನಂತರವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದರು.ಜಿಪಂ ಸಿಇಒ ಗಜಾನನ ಬಾಲೆ ಮಾತನಾಡಿ, ಸಿಎಸ್ಆರ್ ನಿಧಿಯಡಿ ಜಿಲ್ಲೆಯ 60 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯಲ್ಲಿ ಆಯ್ಕೆಯಾಗಿರುವ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಬೇಕು. ಆಯಾ ಶಾಲೆಗಳಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯ, ಕೊಠಡಿಗಳು, ಪೀಠೋಪಕರಣ, ವಿದ್ಯುತ್, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಪಟ್ಟಿಯನ್ನು ಸಂಬಂಧಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಲಿದ್ದಾರೆ. ಈ ಪಟ್ಟಿಯ ಆಧಾರದ ಮೇಲೆ ಶಾಲೆಗಳ ಅಗತ್ಯತೆಗಳನ್ನು ಗುರುತಿಸಿ, ಸಿಎಸ್ಆರ್ ನಿಧಿಯಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸುವಂತೆ ತಿಳಿಸಿದರು.ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಸಹಕಾರ ಇಲಾಖೆಯ ಉಪ ನಿಬಂಧಕ ದಾನಯ್ಯ ಹಿರೇಮಠ ಸೇರಿದಂತೆ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲಿಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.ಕೋಟ್‌ಬಾಗಲಕೋಟೆ ಜಿಲ್ಲೆಯನ್ನು ನಿಸರ್ಗ ಪ್ರಿಯ ಹಾಗೂ ಹಸಿರು ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಖಾನೆಗಳ ಸಿಎಸ್ಆರ್ ನಿಧಿಯಡಿ ಹಸಿರು ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಕಾರ್ಖಾನೆಗೆ ನಿಗದಿಪಡಿಸಿರುವ 10 ಸಾವಿರ ಸಸಿಗಳನ್ನು ಆಯಾ ಕಾರ್ಖಾನೆಗಳಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನೆಡುವಂತೆ ಕ್ರಮ ಕೈಗೊಳ್ಳಬೇಕು. ನೆಟ್ಟ ಸಸಿಗಳ ಸಂರಕ್ಷಣೆ ಹಾಗೂ ಅವುಗಳ ಬೆಳವಣಿಗೆಯ ಮೇಲೂ ನಿರಂತರವಾಗಿ ನಿಗಾವಹಿಸಬೇಕು.ಸಂಗಪ್ಪ, ಜಿಲ್ಲಾಧಿಕಾರಿಗಳು