ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ರೂಪಿಸಬೇಕು ಎಂದು ರಾಜ್ಯ ರೈತಪರ ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಅಭಿಪ್ರಾಯಪಟ್ಟರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ರಾಜ್ಯ ರೈತಪರ ಹೋರಾಟಗಾರರ ಸಂಘ ಆಯೋಜಿಸಿದ್ದ ವಿಶ್ವ ರೈತರ ದಿನಾಚರಣೆಯನ್ನು ಗಣ್ಯರೊಂದಿಗೆ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ರೈತ ಸಮುದಾಯದ ಗಂಡು ಮಕ್ಕಳಿಗೆ ಮದುವೆಯಾಗಲು ಹೆಣ್ಣುಮಕ್ಕಳನ್ನು ಕೊಡುತ್ತಿಲ್ಲ. ಅನ್ನದಾತರ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರಗಳಿಂದ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತರ ಮಕ್ಕಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ರೂಪಿಸಬೇಕು. ರೈತರ ಸಮಸ್ಯೆಗಳ ನಿವಾರಣೆ, ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ಕಾಳೇನಹಳ್ಳಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವ ರೈತರ ದಿನವನ್ನು ಸರ್ಕಾರಿ ರಜಾದಿನ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.ಇದಕ್ಕೂ ಮುನ್ನ ಕಾಳಿಕಾಂಬ ದೇವಾಲಯದಲ್ಲಿ ಸೇರಿದ ರೈತರು ಹಳ್ಳಿಕಾರ್ ರಾಸುಗಳನ್ನು ಮೆರವಣಿಗೆ ಮಾಡಿ ಉತ್ತಮ ರಾಸುಗಳ ಪ್ರದರ್ಶನ ನಡೆಸಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿದರು.
ವೇದಿಕೆಯಲ್ಲಿ ಸವಳಂದ ಮಲ್ಲೇಶ್ವರ ಗುರುಮಠದ ಪೀಠಾಧ್ಯಕ್ಷೆ ಮಹಾಮಾತೆ ಅಕ್ಕಮಹಾದೇವಿ, ವಕೀಲರಾದ ಅರುಣ್, ಶಿವಕುಮಾರ್, ರೈತಸಂಘದ ರಾಜ್ಯ ಉಪಾಧ್ಯಕ್ಷ ಮುನಿಯಪ್ಪ ಹೆಬ್ರಿ, ಮಂಜುನಾಥ್, ಮುದ್ದಕೃಷ್ಣ, ಉದ್ಯಮಿ ಜಗನ್ನಾಥಶೆಟ್ಟಿ, ಸಿದ್ದಪ್ಪ ಹೆಮ್ಮಿಗೆ, ರಮೇಶ್, ಅಂಕರಾಜು ಮತ್ತಿತರರಿದ್ದರು.ಡಿ.26ಕ್ಕೆ ದಿಶಾ ಸಭೆ
ಮಂಡ್ಯ:ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ ಸಭೆ)ಯನ್ನು ಡಿ.26 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಅವರು ತಿಳಿಸಿದ್ದಾರೆ.ಅಪರಿಚಿತ ಪುರುಷನ ಶವ ಪತ್ತೆ
ಮದ್ದೂರು:ಪಟ್ಟಣದ ಕೊಲ್ಲಿ ಸರ್ಕಲ್‌ನ ಬೆಂಗಳೂರು- ಮೈಸೂರು ಹೆದ್ದಾರಿಯ ಪ್ಲೇ ಓವರ್ ಕಂಬದ ಬಳಿ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಈತ ಕೊನೆ ಉಸಿರೆಳದಿದ್ದಾನೆ. ಮೃತನ ಬಲಗಣ್ಣಿನ ತಲೆ ಮತ್ತು ಕಿವಿ ಬಳಿ ಹಳೆ ಗಾಯದ ಗುರುತು ಇದ್ದು. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆ ಕೊರಲಾಗಿದೆ.