ಸಾರಾಂಶ
ಹೊಸಕೋಟೆ: ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಟಾನ ಮಾಡಿದ್ದು ಸರ್ಕಾರಿ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ತಾಪಂ ಇಒ ಡಾ.ಸಿ.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ನಂದಗುಡಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಯೋಗದಡಿ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಂಗ್ಲಭಾಷೆ ವ್ಯಾಮೋಹದಿಂದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಇದರ ಪರಿಣಾಮ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಬಂದಿದೆ. ಸರ್ಕಾರ ಎಷ್ಟೆಲ್ಲಾ ಸವಲತ್ತುಗಳನ್ನು ಕೊಟ್ಟರೂ ದಾಖಲಾತಿ ಪ್ರಮಾಣ ಕುಂಠಿತವಾಗುತ್ತಿದೆ. ಕೇವಲ ಕಡು ಬಡತನ ಹೊಂದಿರುವ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಬರುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಖಾಸಗಿ ಶಾಲೆಯಲ್ಲಿ ಪೈಪೋಟಿ ನೀಡುವ ಹತ್ತಾರು ಯೋಜನೆ ರೂಪಿಸಿ ದಾಖಲಾತಿ ಹೆಚ್ಚಳಕ್ಕೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು, ಪೋಷಕರು ಸರ್ಕಾರಿ ಶಾಲೆಗಳ ಬಗ್ಗೆ ಗಮನಹರಿಸಿ ಶಾಲೆಗಳನ್ನು ಉಳಿಸಬೇಕು ಎಂದರು.ಶಾಸಕ ಶರತ್ ಬಚ್ಚೇಗೌಡರು, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು ಖಾಸಗಿ ಕಂಪನಿಗಳ ಮೂಲಕ ಸಿಎಸ್‌ಆರ್ ಅನುದಾನ ತಂದು ಶಾಲೆಗಳನ್ನು ಅಭಿವೃದ್ದಿ ಮಾಡುತ್ತಿದ್ದಾರೆ. ಇನ್ಫೋಸಿಸ್ ಕಂಪನಿ ಮೂಲಕ ಗ್ರಾಪಂ ವ್ಯಾಪ್ತಿಗೊಂದು ಮಾದರಿ ಶಾಲೆ ನಿರ್ಮಿಸುವ ಪಣ ತೊಟ್ಟಿದ್ದಾರೆ ಎಂದು ಹೇಳಿದರು.
ಅಕ್ಷರ ದಾಸೋಹದ ಜಿಲ್ಲಾ ಉಪ ನಿರ್ದೇಶಕರಾದ ಲಲಿತಮ್ಮ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕು. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಪರಿಕಲ್ಪನೆ, ಉದ್ದೇಶ ಮತ್ತು ಇಲಾಖೆಯ ಆಶಯದೊಂದಿಗೆ ಸರ್ಕಾರಿ ಶಾಲೆಯಲ್ಲಿ ಒದಗಿಸುತ್ತಿರುವ ಪ್ರೋತ್ಸಾಹದಾಯಕ ಶೈಕ್ಷಣಿಕ ಸೌಲಭ್ಯಗಳನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು.ಮಧ್ಯಾಹ್ನ ಬಿಸಿ ಊಟ ಯೋಜನೆಯಡಿ ವಿತರಿಸುವ ಬಿಸಿ ಊಟದ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆ ನಿವಾರಣೆಗೆ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಪೌಷ್ಠಿಕ ಬೆಂಬಲದ ಬಗ್ಗೆ ಫೋಷಕರಲ್ಲಿ ಅರಿವು ಮೂಡಿಸಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಲ್ಲಿ ದಾಖಲಿಸಲು ಪ್ರೇರೇಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಎನ್‌ಎನ್.ಮಂಜುನಾಥ, ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎನ್. ಗಂಗಾಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪಾಷಾ, ಹೊಸಕೋಟೆ ತಾಲೂಕು ಬಿಆರ್‌ಸಿ ನಾಗರಾಜ್, ಕೆಪಿಎಸ್ ಶಾಲೆ ಪ್ರಾಂಶುಪಾಲರಾದ ಶುಭ, ನೆಲವಾಗಲು ಮುಖ್ಯ ಶಿಕ್ಷಕ ನೂಲಗಿರಿ, ಶಿವನಾಪುರ ಮುಖ್ಯಶಿಕ್ಷಕ ಸತೀಶ್‌ಕುಮಾರ್, ಸಿಆರ್‌ಪಿ ನಟರಾಜ್. ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಮನ್ವಯ ಅಧಿಕಾರಿ ಮಮತಾ, ಮತ್ತು ನವೀನ್‌ಕುಮಾರ್, ಸಿಆರ್‌ಪಿಗಳಾದ ಮುನಿರಾಜು. ಶ್ರೀನಿವಾಸ್. ಪ್ರೇಮಕುಮಾರಿ, ಸತೀಶ್‌ಕುಮಾರ್ ಹಾಜರಿದ್ದರು.ಫೋಟೋ: 15 ಹೆಚ್‌ಎಸ್‌ಕೆ 4
ಹೊಸಕೋಟೆ ತಾಲೂಕು ನಂದಗುಡಿಯ ಕೆಪಿಎಸ್ ಶಾಲಾ ಆವರಣದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ತಾಪಂ ಇಒ ಡಾ. ನಾರಾಯಣಸ್ವಾಮಿ ಮತ್ತು ಜಿಲ್ಲಾ ಉಪ ನಿರ್ದೇಶಕ ಲಲಿತಮ್ಮ ಹಾಗೂ ಗಣ್ಯರು ಉದ್ಘಾಟಿಸಿದರು.