ಕನ್ನಡಪ್ರಭ ವಾರ್ತೆ ವಿಜಯಪುರ

ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವಿದ್ಯಾರ್ಥಿಗಳು ತಾವು ಕಲಿತ ವಿಜ್ಞಾನ ವಿಷಯಗಳನ್ನು ಮಾದರಿಗಳ ಮೂಲಕ ಪ್ರದರ್ಶಿಸುವ ಕಾರ್ಯಕ್ರಮವಾಗಿದೆ. ಮಾದರಿಗಳನ್ನು ತಯಾರಿಸುವುದರಿಂದ ಕಲಿಕೆಯು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ನಾರಾಯಣ ಬಾಬಾನಗರ ಹೇಳಿದರು.

ನಗರದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಎಸ್.ಕುಮಾರ ಮಹೇಶ ಪಿಯು ಸೈನ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದಶನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಿತ್ಯ ಜೀವನದಲ್ಲಿ ವಿಜ್ಞಾನವು ಅವಿಭಾಜ್ಯ ಅಂಗವಾಗಿದೆ. ವಿದ್ಯಾರ್ಥಿಗಳು ಕಲಿಯುವ ಪ್ರತಿಯೊಂದು ವಿಷಯವು ವಿಜ್ಞಾನದಿಂದಲೇ ಆರಂಭವಾಗುತ್ತದೆ. ವಿಜ್ಞಾನವಿಲ್ಲದೆ ಜಗತ್ತೇ ಇಲ್ಲ. ಗ್ರಾಮೀಣ ಜನರಿಗೆ ವಿಜ್ಞಾನದ ಅರಿವು ಮೂಡಿಸಿ ಮೂಡನಂಬಿಕೆಗಳನ್ನು ಹೋಗಲಾಡಿಸಬೇಕು ಎಂದರು.

ಸಂಸ್ಥೆ ಅಧ್ಯಕ್ಷೆ ಡಾ.ಎಚ್.ಟಿ.ಲತಾದೇವಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಮತ್ತು ಸಂಶೋಧನಾ ಕೌಶಲ್ಯಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ ವೈಜ್ಞಾನಿಕ ಕುತೂಹಲವನ್ನು ಕೆರಳಿಸುತ್ತದೆ ಎಂದರು. ಡೈನೋಮೀಟರ್, ಸೋಲಾರ್‌ ಸಿಸ್ಟಮ್, ಎಲೆಕ್ಟ್ರಾನಿಕ್ ಲೈಟಿಂಗ್ ಮಾಡೆಲ್ ಮುಂತಾದ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ಅವುಗಳಿಂದ ವಿಜ್ಞಾನ ಮಾಡಲ್ ಮಾಡಿ ತಮ್ಮ-ತಮ್ಮ ಪ್ರತಿಭೆಗಳನ್ನು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಏರ್ಪಡಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ, ಪ್ರಾಚಾರ್ಯ ಸದಾಶಿವ ವಾಲಿಕಾರ, ಮುಖ್ಯೋಪಾಧ್ಯಾಯ ಪ್ರಶಾಂತ ಹಿರೇಮಠ, ರವಿ ಪತಂಗೆ ಹಾಗೂ ವಿದ್ಯಾರ್ಥಿಗಳು ಇದ್ದರು.