ಒಕ್ಕಲಿಗರ ಸಂಘಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ: ಸ್ಪಟಿಕ ಶ್ರೀ, ಎಚ್‌ಡಿಕೆ

| Published : Nov 23 2024, 01:18 AM IST / Updated: Nov 23 2024, 11:29 AM IST

ಒಕ್ಕಲಿಗರ ಸಂಘಕ್ಕೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಿ: ಸ್ಪಟಿಕ ಶ್ರೀ, ಎಚ್‌ಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಒಕ್ಕಲಿಗ ಸಂಘದಲ್ಲಿ ಹೆಚ್ಚುತ್ತಿರುವ ಗುಂಪುಗಾರಿಕೆ ಬಗ್ಗೆ ಶ್ರೀನಂಜಾವಧೂತ ಸ್ವಾಮೀಜಿ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

 ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವಂತೆ ಪದಾಧಿಕಾರಿಗಳಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ರಾಜ್ಯ ಒಕ್ಕಲಿಗರ ಸಂಘವು ನಗರದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಕೆಂಪೇಗೌಡ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ(ಕಿಮ್ಸ್) ಪದವಿ 100 ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ಗೆ 68 ಸೀಟುಗಳ ಹೆಚ್ಚಳ ಮಾಡಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರದ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭ ಆಯೋಜಿಸಲಾಗಿತ್ತು.

ಈ ವೇಳೆ ಸಂಘದ ಚುನಾವಣೆ, ಸಂಘದಲ್ಲಿರುವ ಕೆಲವು ಅಪಸ್ವರಗಳ ಬಗ್ಗೆಯೇ ಸ್ವಾಮೀಜಿ ಹಾಗೂ ಕುಮಾರಸ್ವಾಮಿ ಮಾತನಾಡಿ, ಸರ್ಕಾರ ಮಧ್ಯಪ್ರವೇಶಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದರು.

ಶ್ರೀನಂಜಾವಧೂತ ಸ್ವಾಮೀಜಿ ಮಾತನಾಡಿ, ಸಂಘದಲ್ಲಿ ಉನ್ನತ ಹುದ್ದೆಯಲ್ಲಿರುವವರು ಸರ್ವಾಕಾರಿಯಂತೆ ವರ್ತಿಸುವುದು ಬೇಡ. ಇಲ್ಲಿ ನೀವು ‘ಸೇವಕರು’ ಅಷ್ಟೇ. ನಾವು ಸಹ ಮಠದ ಮಾಲೀಕರಲ್ಲ. ಮಠವನ್ನು ಕಾಯುವ ‘ಕಾವಲುಗಾರರು’. ಸಂಘಕ್ಕೆ ದ್ರೋಹ ಬಗೆಯಬೇಡಿ. ಸರ್ಕಾರದಿಂದ ಆಡಳಿತಗಾರರನ್ನು ನೇಮಕ ಮಾಡುವ ಸನ್ನಿವೇಶ ತಂದುಕೊಳ್ಳಬೇಡಿ. ಸಂಘದ ಆಸ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಗಮನವಹಿಸಿ ಎಂದರು.

ಸಾಕಷ್ಟು ಹಿರಿಯರು, ಎಚ್.ಡಿ.ದೇವೇಗೌಡ ಅವರ ಕುಟುಂಬ ಸಂಘದಿಂದ ಒಂದು ಕಾಫಿ-ತಿಂಡಿ ಸಹ ಸೇವನೆ ಮಾಡಿಲ್ಲ. ಇಂತಹ ನಿಸ್ವಾರ್ಥಿಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮರೆಯದೇ ಸಂಘದ ಗೌರವ ಕಡಿಮೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀಸೌಮ್ಯನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

‘ಗುಂಪುಗಾರಿಕೆ ಮಾಡಿದರೆ ಸಂಘದ ಗತಿ ಏನು?’

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗಾಗಿ ಉದಾತ್ತ ಚಿಂತನೆಗಳಿಂದ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘ ಇವತ್ತು ಗುಂಪುಗಾರಿಕೆಯಿಂದ ಸೊರಗುತ್ತಿದೆ. ಒಕ್ಕಲಿಗರ ಸಂಘ ಪ್ರತಿದಿನ ಗುಂಪುಗಾರಿಕೆ ಮೂಲಕ ಹೊರಗಡೆ ಸಂಘದ ಬಗ್ಗೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ ಸಂಘದ ಗತಿ ಏನು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಎಂದು ಖಾರವಾಗಿ ಪ್ರಶ್ನಿಸಿದರು.

ಹಿಂದೆ ನಮ್ಮ ಒಕ್ಕಲು ಸಮಾಜದ ಪೂರ್ವಿಕರು ಸಂಘ ಕಟ್ಟಲು ಪಟ್ಟ ಶ್ರಮ ಏನು ಎಂಬುದನ್ನು ಈಗಿನ ಆಡಳಿತ ಮಂಡಳಿಯಲ್ಲಿರುವ 35 ಜನ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಬೆಂದ ಮನೆಯಲ್ಲಿ ಗಳ ಹಿರಿಯುವಂತಹ ಜನರು ಕೂಡ ಸಂಘದಲ್ಲಿ ಸೇರಿಕೊಂಡಿದ್ದಾರೆ. ಸಂಘಕ್ಕೆ, ಒಕ್ಕಲಿಗ ಸಮಾಜಕ್ಕೆ ಕಿಂಚಿತ್ತು ಒಳ್ಳೆಯದು ಮಾಡಬೇಕು ಎಂಬ ಹಂಬಲ ಹೊಂದಿರುವ ಕೆಲವರು ಕೂಡ ಈ ಸಂಘದಲ್ಲಿ ಇದ್ದಾರೆ ಎಂದರು.

ಕಿಮ್ಸ್‌ ಆಸ್ಪತ್ರೆಗೆ ಅಶೋಕ್‌ ಮೆಚ್ಚುಗೆ

ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಹಾವಳಿ ಹೆಚ್ಚಾಗಿರುವ ಇಂತಹ ವೇಳೆಯಲ್ಲಿ ಸೇವಾ ಮನೋಭಾವದಿಂದ ನಡೆಯುತ್ತಿರುವ ಕಿಮ್ಸ್ ರೀತಿಯ ಆಸ್ಪತ್ರೆಗಳು ಬಡವರಿಗೆ ಮತ್ತಷ್ಟು ಗುಣಮಟ್ಟ ಚಿಕಿತ್ಸೆ ನೀಡುವಂತಾಗಬೇಕು. ಅದರೆ, ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಶುಲ್ಕವನ್ನು ಹೆಚ್ಚಳ ಮಾಡಿ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.