ಸಾರಾಂಶ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಕುಡಿಯುವ ನೀರಿನ ತೊಂದರೆ ಕಂಡು ಬರುವ ಮುನ್ನವೇ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಜನ ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯು.ಬಿ. ಬಣಕಾರ ಸೂಚನೆ ನೀಡಿದರು.ಪಟ್ಟಣದ ತಹಸೀಲ್ದಾರ ಕಚೇರಿ ಸಭಾಭವನದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಭೆಯಲ್ಲಿ ಅವರು ಮಾತನಾಡಿದರು. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂತರ್ಜಲದ ಮಟ್ಟ ಕಡಿಮೆಯಾಗಿ ಕೊಳವೆ ಬಾವಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿ ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಂಭವವಿದೆ. ಅಧಿಕಾರಿಗಳು ಕುಡಿಯುವ ನೀರಿನ ವಿಚಾರದಲ್ಲಿ ಅಸಡ್ಡೆ ತೊರದೇ ಆಯಾ ಗ್ರಾಮಗಳ ನೀರಿನ ಕುರಿತು ವಾಸ್ತವತೆ ಅರಿತುಕೊಳ್ಳುವ ಕಾರ್ಯ ಮಾಡಬೇಕು. ಸಮಸ್ಯೆಗಳು ಕಂಡು ಬಂದಲ್ಲಿ ತಾಲೂಕು ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ಜಾನುವಾರುಗಳಿಗೆ ನೀರಿನ ತೊಂದರೆಗಳು ಆಗದಂತೆ ಅಧಿಕಾರಿಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕುಡಿಯುವ ನೀರಿಗಾಗಿ ಬಾಡಿಗೆ ಪಡೆದ ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೆ ಬಾಡಿಗೆ ಹಣ ಪಾವತಿ ಮಾಡಬೇಕು. ನೀರಿನ ಅಲಭ್ಯತೆ ಕಂಡುಬಂದಲ್ಲಿ ಕೊಳವೆ ಬಾವಿಗಳನ್ನು ಪ್ಲಶಿಂಗ್ ಮಾಡಲು ಕ್ರಮ ಕೈಗೊಳ್ಳಬೇಕು. ಯಾವ ಯಾವ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಲು ಅವಶ್ಯಕತೆಯಿದ್ದು, ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಪ್ರಸ್ತಾವನೆ ಪಡೆದುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಹಾಗೂ ನೊಡಲ್ ಅಧಿಕಾರಿಗಳು, ಪಿಡಿಒ, ಗ್ರಾಮಾಭಿವೃದ್ಧಿ ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಿ ಕುಡಿಯುವ ನೀರಿನ ತೊಂದರೆಗಳು ಉಲ್ಬಣಿಸದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ತಹಸೀಲ್ದಾರರಾದ ಎಚ್. ಪ್ರಭಾಕರಗೌಡ, ಕೆ. ಗುರುಬಸವರಾಜ, ತಾಪಂ ಇಒ ಮಲ್ಲಿಕಾರ್ಜುನ ಬಿ.ಎಂ., ಪಿ.ಬಿ. ಕಟ್ಟಿ, ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ ಎಸ್.ಟಿ. ಸೇರಿದಂತೆ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ನೊಡಲ್ ಅಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ನಿರ್ವಹಿಸಿದರು.