ಸಾರಾಂಶ
ನರಗುಂದ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪಡೆಯಲು ಕ್ಯೂಆರ್‌ಕೋಡ್ ಮೂಲಕ ಆಧುನಿಕತೆಯ ಟಚ್ ನೀಡಿ ಬೆರಳ ತುದಿ ಮೂಲಕ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಾಪಂ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ಅವರು ಶುಕ್ರವಾರ ತಾಪಂ ಸಭಾ ಭವನದಲ್ಲಿ ಹಮ್ಮಿಕೊಂಡ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.ದೈನಂದಿನ ಕೆಲಸ ಕಾರ್ಯಗಳ ಒತ್ತಡದಲ್ಲಿ ಹತ್ತಿರದ ಗ್ರಾಪಂಗೆ ತೆರಳಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸುವುದು ಕೂಲಿಕಾರರಿಗೆ ಕಷ್ಟ. ಹೀಗಾಗಿ ನರೇಗಾ ಯೋಜನೆಗೆ ಕ್ಯೂಆರ್ ಕೋಡ್ ಮೂಲಕ ಅಂಗೈಯಲ್ಲಿ ಉದ್ಯೋಗ ಖಾತ್ರಿ ಮಾಹಿತಿ ನೀಡಿ ಕಾಮಗಾರಿ ಪಡೆಯಲು ಬೇಡಿಕೆ ಸಲ್ಲಿಸುವ ಕೆಲಸ ಸರಳಗೊಳಿಸಲಾಗಿದೆ. ಈ ಆಧುನಿಕತೆಯ ತಂತ್ರಜ್ಞಾನವನ್ನು ತಾಲೂಕಿನ ಎಲ್ಲ ಕೂಲಿಕಾರರು ಪಡೆದುಕೊಂಡು ತಮ್ಮಿಷ್ಟದ ಬೇಡಿಕೆ ಸಲ್ಲಿಸಬಹುದು ಎಂದರು.
ನರೇಗಾ ವೈಯಕ್ತಿಕ ಕಾಮಗಾರಿಗಳ ಮೂಲಕ ಗ್ರಾಮೀಣ ಪ್ರದೇಶದ ಕೂಲಿಕಾರರು ತಮ್ಮ ಜೀವನ ಭದ್ರಗೊಳಿಸಿಕೊಂಡ ಉದಾಹರಣೆಗಳಿವೆ. ಇನ್ನಷ್ಟು ಈ ಕಾರ್ಯ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವು ಕ್ಯೂಆರ್ ಕೋಡ್ ಒಳಗೊಂಡ ಮಾಹಿತಿ ಪತ್ರ ಪ್ರಚಾರಕ್ಕಾಗಿ ವಿತರಿಸಿದೆ ಎಂದು ತಿಳಿಸಿದರು.ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಜನರು ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಗೆ ಬೇಡಿಕೆ ಸಲ್ಲಿಸಬಹುದು. ಈ ಬಗ್ಗೆ ಗ್ರಾಪಂ ಜಿಕೆಎಂ ಮತ್ತು ಬಿಎಫ್ಟಿ ಸಹಿತಿ ಎಲ್ಲ ಹಂತದ ಗ್ರಾಪಂ ಸಿಬ್ಬಂದಿ ಗ್ರಾಪಂ ಕಚೇರಿ ಹಾಗೂ ಜನರು ಹೆಚ್ಚಾಗಿ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಲಗತ್ತಿಸಿ ಹೆಚ್ಚು ಹೆಚ್ಚು ಜನರು ಬೇಡಿಕೆ ಸಲ್ಲಿಸುವಂತೆ ನೋಡಿಕೊಂಡು ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಉದ್ಯೋಗ ಖಾತ್ರಿಯ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರಂತರ ಆದಾಯ ನೀಡುವ ಬೆಳೆ ಬೆಳೆಯಬಹುದಾಗಿದೆ. ಬಹುವಾರ್ಷಿಕ ಬೆಳೆಗಳಾದ ಶ್ರೀಗಂಧ, ಹಬ್ಬೆವು, ಹುಣಸೆ, ಮಾವು, ವೀಳೆದೆಲೆ, ಕರಿಬೇವು, ಡ್ರ್ಯಾಗನ್ ಫ್ರೊಟ್, ನುಗ್ಗೆ, ಪೇರಲ್, ಸೀತಾಫಲ, ನೆಲ್ಲಿ, ಸೀಬೆ, ಹೂವಿನ ಬೆಳೆಗಳಾದ ಮಲ್ಲಿಗೆ ಗುಲಾಬಿ, ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯಿ, ನಿಂಬೆ ಸೇರಿ ಇತರೆ ಹಲವು ಬೆಳೆಗಳನ್ನು ಬೆಳೆಯಲು ಆರ್ಥಿಕ ನೆರವು ನೀಡಲಾಗುತ್ತದೆ. ಅಲ್ಲದೆ ಕೋಳಿ, ಕುರಿ ಶೆಡ್‌ಗಳ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ ಎಂದರು.ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ ₹349 ಕೂಲಿ ಇದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ, ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ತಾಪಂ ಆಡಳಿತಾಧಿಕಾರಿ ಎಚ್.ಬಿ. ಹುಲಗಣ್ಣವರ, ಪಂಚಾಯತ್ ರಾಜ ಸಹಾಯಕ ನಿರ್ದೇಶಕಿ ಕೃಷ್ಣಮ್ಮ ಹಾದಿಮನಿ, ತಾಲೂಕಿನ ನರೇಗಾ ಯೋಜನೆಯ ಅನುಷ್ಠಾನ ಇಲಾಖೆಗಳಾದ ಅರಣ್ಯ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್ ಇಂಜಿನೀಯರ್ ಇಲಾಖೆಗಳ ತಾಲೂಕು ಅಧಿಕಾರಿಗಳು, ತಾಲೂಕಿನ 13 ಗ್ರಾಪಂ ಪಿಡಿಓಗಳು, ತಾಲೂಕು ಐಇಸಿ ಸಂಯೋಜಕ ಸುರೇಶ ಬಾಳಿಕಾಯಿ, ತಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.