15ರಂದು ಬೃಹತ್ ಮಾನವ ಸರಪಳಿ ಯಶಸ್ವಿಗೊಳಿಸಲು ಸೂಚನೆ

| Published : Sep 11 2024, 01:05 AM IST / Updated: Sep 11 2024, 01:06 AM IST

ಸಾರಾಂಶ

ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಭದ್ರತೆ ಒದಗಿಸುವಂತೆ ತಿಳಿಸಿದ ಉಪವಿಭಾಗಾಧಿಕಾರಿ, ಆರೋಗ್ಯ ಇಲಾಖೆಯ ಮೂಲಕ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಸೆಪ್ಟೆಂಬರ್ 15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಹಾಗೂ ಅಂದು ನಡೆಸುವ ಮಾನವ ಸರಪಳಿ ಯಶಸ್ವಿಗೊಳಿಸುವಂತೆ ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ ಸೂಚನೆ ನೀಡಿದ್ದಾರೆ.

ಮಂಗಳೂರು ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಈ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಈಗಾಗಲೇ ಸೂಚಿಸಿರುವಂತೆ ಮಾನವ ಸರಪಳಿ ರಚಿಸಲು ಅಂತಿಮ ಸಿದ್ಧತೆಗಳನ್ನು ಕೈಗೊಳ್ಳುವಂತೆ ತಿಳಿಸಿದ ಅವರು, ಮಾನವ ಸರಪಳಿ ರಚನೆ ಕುರಿತಂತೆ ಸಂಬಂಧಪಟ್ಟ ವ್ಯಾಪ್ತಿಯ ತಹಸೀಲ್ದಾರ್‌ಗಳು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಪಿಡಿಒ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.

ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ವತಿಯಿಂದ ಅಗತ್ಯ ಭದ್ರತೆ ಒದಗಿಸುವಂತೆ ತಿಳಿಸಿದ ಉಪವಿಭಾಗಾಧಿಕಾರಿ, ಆರೋಗ್ಯ ಇಲಾಖೆಯ ಮೂಲಕ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಸಹಾಯಕ ಪೊಲೀಸ್ ಆಯುಕ್ತೆ ನಝ್ಮಾ ಫಾರೂಖಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತತರರು ಇದ್ದರು.