ಸಾರಾಂಶ
ಅ. ೧೭ರಂದು ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರು ಮೇಳದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಅ. ೧೭ರಂದು ಮೈಸೂರಿನಲ್ಲಿ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರು ಮೇಳದ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸಲಹೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅ. ೧೭ರಂದು ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಮೇಳದಲ್ಲಿ ರಾಜ್ಯದ ಎಲ್ಲಾ ವಲಯಗಳಿಂದ ೨೫೦ಕ್ಕೂ ಹೆಚ್ಚು ಪ್ರತಿಷ್ಠಿತ ಹಾಗೂ ನೋಂದಾಯಿತ ಉದ್ಯೋಗದಾತ ಕಂಪನಿಗಳು ಭಾಗವಹಿಸುತ್ತಿವೆ. ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಇದು ಉತ್ತಮ ಅವಕಾಶವಾಗಿದೆ ಎಂದರು.ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಯಾವುದೇ ಪದವಿ ಉತ್ತೀರ್ಣರಾಗಿರುವ ಯುವಜನತೆ ಕನಿಷ್ಠ ೫ ಪ್ರತಿಗಳ ಅಗತ್ಯ ಶೈಕ್ಷಣಿಕ ಹಾಗೂ ಅನುಭವದ ದಾಖಲಾತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಜನರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಧಿಕಾರಿಗಳು ಯುವಜನರನ್ನು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಚಾಮರಾಜನಗರ ವಿಶ್ವವಿದ್ಯಾನಿಲಯ ಮೌಲ್ಯ ಮಾಪನ ಕುಲ ಸಚಿವರಾದ ಪ್ರೊ. ಸಿ.ಜಿ. ವೆಂಕಟರಮಣ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮಹಮ್ಮದ್ ಅಕ್ಬರ್, ಸಹಾಯಕ ನಿರ್ದೇಶಕರಾದ ಮಲ್ಲೇಶ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜು, ಜಿ.ಟಿ.ಟಿ.ಸಿ., ಗುಂಡ್ಲುಪೇಟೆ ಸೇರಿದಂತೆ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಐ.ಟಿ.ಐ. ಕಾಲೇಜುಗಳ ಪ್ರಾಂಶುಪಾಲರು, ಪದವಿ ಕಾಲೇಜುಗಳ ಪ್ರಾಂಶುಪಾಲರು, ಜಿಲ್ಲೆಯ ಕೈಗಾರಿಕೆಗಳ ಮುಖ್ಯಸ್ಥರು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.