ಕನ್ನಡಪ್ರಭ ವಾರ್ತೆ ಬೈಲಹೊಂಗಲ
ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐಕ್ಯ ಸ್ಥಳ ಕೇವಲ ಸ್ಥಳೀಯ ಐತಿಹಾಸಿಕ ತಾಣವಲ್ಲ, ಅದು ನಾಡಿನ ಸ್ವಾತಂತ್ರ್ಯ ಹೋರಾಟದ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿದೆ. ಇದನ್ನು ತಕ್ಷಣವೇ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಎಂದು ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದರು.ನಗರದ ಚನ್ನಮ್ಮಾಜಿಯ ಐಕ್ಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಚನ್ನಮ್ಮಾಜಿಯ ಸ್ಮಾರಕವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಈ ಸ್ಥಳವನ್ನು ಸುಸಜ್ಜಿತ ಪ್ರವಾಸಿ ಹಾಗೂ ಐತಿಹಾಸಿಕ ಕೇಂದ್ರವಾಗಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಚನ್ನಮ್ಮಾಜಿಯ ಹೆಸರಿನಲ್ಲಿ ಸೈನಿಕ ಶಾಲೆ ಸ್ಥಾಪಿಸಿದರೆ ಅದು ಯುವಪೀಳಿಗೆಗೆ ದೇಶಭಕ್ತಿ ಮತ್ತು ಶಿಸ್ತು ಬೆಳೆಸಲು ಸಹಾಯಕವಾಗುತ್ತದೆ. ಕರ್ನಾಟಕದ ಹೆಮ್ಮೆಯ ವೀರರಾಣಿಯ ಹೆಸರನ್ನು ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸ್ಥಳೀಯ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲ ಸೌಲಭ್ಯಗಳು, ಮಾಹಿತಿ ಫಲಕಗಳು, ಸಂಗ್ರಹಾಲಯ ಹಾಗೂ ಸ್ಮಾರಕ ನಿರ್ವಹಣೆಗೆ ವಿಶೇಷ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಹೋರಾಟ ಹಾಗೂ ಚಳುವಳಿ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಳನಗೌಡ ಪಾಟೀಲ, ಶಿವು ಶಿರಸಂಗಿ, ಡಾ.ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ, ಕನ್ನಡ ಚಳುವಳಿ ಮುಖಂಡ ಗಿರೀಶ ಗೌಡ, ಚನ್ನಬಸವ ಜೆಕಿನ್, ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಮಂಜುನಾಥ ದೇವ ಸೇರಿದಂತೆ ಇತರರು ಇದ್ದರು.