ಏಕ ಭಾರತ ಶ್ರೇಷ್ಠ ಭಾರತ‍ವನ್ನಾಗಿಸಿ

| Published : Nov 16 2025, 02:15 AM IST

ಸಾರಾಂಶ

ವಂದೇ ಮಾತರಂ ಗೀತೆಯು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತು. ಅಂದು ಬ್ರಿಟಿಷರು ವಿಭಜಿಸಿದ್ದ ಬಂಗಾಳವನ್ನು ಒಂದುಗೂಡಿಸುವ ಕಾರ್ಯ ಮಾಡಿದ್ದು ಇದೇ ಗೀತೆ. ಭಾರತ ಕೇವಲ ಭೂಮಿಯಲ್ಲ ಮಾತೃಭೂಮಿಯಾಗಿದೆ.

ಹುಬ್ಬಳ್ಳಿ:

ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರು 560ಕ್ಕೂ ಅಧಿಕ ಸಂಸ್ಥಾನ ವಿಲೀನಗೊಳಿಸಿ ಏಕ ಭಾರತವನ್ನಾಗಿಸಿದ್ದಾರೆ. ಇಂದಿನ ಯುವಕರು ಒಂದುಗೂಡಿ ಇದನ್ನು ಶ್ರೇಷ್ಠ ಭಾರತವನ್ನಾಗಿಸಲು ಶ್ರಮಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕರೆ ನೀಡಿದರು. ವಲ್ಲಬಾಯಿ

ಭಾರತದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನದ ಅಂಗವಾಗಿ ಶನಿವಾರ ಯುವ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ ಹಾಗೂ ಹು-ಧಾ ಮಹಾನಗರ ಪಾಲಿಕೆ ಸಹಯೋಗದಡಿ ಇಲ್ಲಿನ ಬಿವಿಬಿ ತಾಂತ್ರಿಕ ವಿವಿಯಿಂದ ತೋಳನಕೆರೆ ವರೆಗೆ ನಡೆದ "ಸರ್ದಾರ್ @150 ಏಕತಾ ನಡಿಗೆ "ಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ವರ್ಷ ಎಂದಿಗೂ ಮರೆಯಲಾಗದ ವರ್ಷ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಒಂದುಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರ 150ನೇ ಜನ್ಮದಿನವಾಗಿದೆ. ಜತೆಗೆ ದೇಶದ ಮನಸ್ಸುಗಳನ್ನು ಒಂದುಗೂಡಿಸಲು ಪ್ರಮುಖ ಪಾತ್ರವಹಿಸಿದ್ದ ಹಾಗೂ ಬ್ರಿಟಿಷರಲ್ಲಿ ಭಯ ಮೂಡಿಸಿದ್ದ ಬಂಕಿಮ್‌ ಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದೆ. ಇದೊಂದು ಹರ್ಷದ ದಿನ ಎಂದು ಬಣ್ಣಿಸಿದರು.

ನಡುಕ ಹುಟ್ಟಿಸಿದ ಗೀತೆ:

ವಂದೇ ಮಾತರಂ ಗೀತೆಯು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತು. ಅಂದು ಬ್ರಿಟಿಷರು ವಿಭಜಿಸಿದ್ದ ಬಂಗಾಳವನ್ನು ಒಂದುಗೂಡಿಸುವ ಕಾರ್ಯ ಮಾಡಿದ್ದು ಇದೇ ಗೀತೆ. ಭಾರತ ಕೇವಲ ಭೂಮಿಯಲ್ಲ ಮಾತೃಭೂಮಿಯಾಗಿದೆ. ಆ ಕಲ್ಪನೆ ಮೂಡಿಸಿದವರು ಬಂಕಿಮ್‌ ಚಂದ್ರ ಚಟರ್ಜಿ. ಪ್ರತಿಯೊಂದು ಯುವ ಮನಸ್ಸುಗಳು ವಂದೇ ಮಾತರಂ ಕಥೆ, ವ್ಯಥೆ ಪುಸ್ತಕ ಓದುವಂತಾಗಬೇಕು ಎಂದರು.

ಸಂಪೂರ್ಣ ಬಡವರಿಂದ ಕೂಡಿದ ಭಾರತಕ್ಕೆ ಸ್ವತಂತ್ರ್ಯ ದೊರೆತಲ್ಲಿ ತೀವ್ರ ಸಂಕಷ್ಟದ ಸ್ಥಿತಿ ಅನುಭವಿಸಲಿದೆ ಎಂದು ಬ್ರಿಟಿಷರು ಪಾರ್ಲಿಮೆಂಟ್‌ನಲ್ಲಿ ಹಿಯಾಳಿಸಿದ್ದರು. ಆದರೆ, ಇಂದು ಭಾರತವು ಹಿಯಾಳಿಸಿದ ದೇಶವನ್ನೇ ಹಿಂದಿಕ್ಕಿ ಜಗತ್ತಿನ ನಾಲ್ಕನೇ ಬಲಿಷ್ಠ ಆರ್ಥಿಕತೆವುಳ್ಳ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಭಾರತಕ್ಕಿರುವ ಶಕ್ತಿ. 19ನೇ ಶತಮಾನ ಬ್ರಿಟಿಷರ ಶತಮಾನವಾಗಿದ್ದರೆ, 20ನೇ ಶತಮಾನ ಅಮೆರಿಕ ಶತಮಾನವಾಗಿತ್ತು. ಆದರೆ, 21ನೇ ಶತಮಾನ ಭಾರತದದ್ದಾಗಿದೆ. ನಾವೆಲ್ಲರೂ ಐತಿಹಾಸಿಕ ಘಟನೆಗಳು, ಕಲ್ಪನೆಗಳನ್ನು ನೆನಪಿನಲ್ಲಿಟ್ಟುಕೊಂಡು ಮುಂದುವರಿಯಬೇಕೆಂದು ಜೋಶಿ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಿವಿಬಿ ತಾಂತ್ರಿಕ ವಿವಿ ಉಪಕುಲಾಧಿಪತಿ ಅಶೋಕ ಶೆಟ್ಟರ್‌ ಮಾತನಾಡಿ, ಏಕ್‌ ಭಾರತ್‌ ಎಂಬ ಕಲ್ಪನೆಯಡಿ ಸರ್ದಾರ ವಲ್ಲಭಭಾಯಿ ಪಟೇಲರು ಎಲ್ಲ ಸಂಸ್ಥಾನ ಒಂದುಗೂಡಿಸಿ ಭವ್ಯ ಭಾರತ ನಿರ್ಮಾಣಕ್ಕೆ ಕಾರಣರಾದರು. ಭಾರತ ಮುಂದುವರಿದು ಅಭಿವೃದ್ಧಿಯತ್ತ ಮುನ್ನುಗ್ಗಬೇಕಾದಲ್ಲಿ ಒಕ್ಕಟ್ಟು ಅತ್ಯವಶ್ಯಕ. ಎಲ್ಲಿಯ ವರೆಗೂ ನಮ್ಮಲ್ಲಿ ಏಕತೆ ಇರುತ್ತದೆಯೇ ಅಲ್ಲಿಯ ವರೆಗೂ ಯಾವ ಶಕ್ತಿಯೂ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದರು.

ಈ ವೇಳೆ ವಿಪ ಸದಸ್ಯ ಪ್ರದೀಪ ಶೆಟ್ಟರ್‌, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚೌಹಾಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಕಾರ್ಯಕ್ರಮದ ಸಂಯೋಜಕ ಎಂ.ಬಿ. ದಳಪತಿ, ಗೌತಮ ರೆಡ್ಡಿ ಸೇರಿದಂತೆ ಹಲವರಿದ್ದರು.

ಬಳಿಕ ಬಿವಿಬಿ ಕಾಲೇಜಿನಿಂದ ಆರಂಭವಾದ ಸರ್ದಾರ್ @ 150 ಏಕತಾ ನಡಿಗೆಯು ತೋಳನಕೆರೆ ವರೆಗೆ ಆಗಮಿಸಿ ಸಮಾರೋಪಗೊಂಡಿತು. ಈ ವೇಳೆ ನಗರದ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.