ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಪ್ರತಿಯೊಬ್ಬ ಮತದಾರನೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲುಚುನಾವಣೆಗಳಲ್ಲಿ ತಮ್ಮ ಅಮೂಲ್ಯ ಮತ ಚಲಾವಣೆ ಮಾಡಿ ದಕ್ಷ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ದೇಶ ಕಟ್ಟುವ ಕೆಲಸಕ್ಕೆ ಸಹಕಾರ ನೀಡುವಂತೆ ಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶರಾದ ಎಚ್.ಜೆ.ಶಿಲ್ಪ ಹೇಳಿದರು.ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಚುನಾವಣೆ ಶಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ಬಿ.ಎಸ್. ಡಬ್ಲ್ಯೂ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ೧೬ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾದದು. ಆಯ್ಕೆಯಾದ ಜನಪ್ರತಿನಿಧಿಗಳು ಆರೋಗ್ಯ, ಶಿಕ್ಷಣ, ಸಾಮಾಜಿಕ, ವ್ಯವಸ್ಥೆ ಬಲಪಡಿಸಲು ಇಂದಿನ ಯುವ ಮತದಾರರು ಮತದಾನ ಮಾಡಬೇಕು. ಹೆಣ್ಣು ಮಕ್ಕಳಿಗೂ ಎಲ್ಲರಂತೆ ಸಮಾನ ಮತದಾನದ ಹಕ್ಕನ್ನು ಕಲ್ಪಿಸಲಾಗಿದೆ. ಯುವ ಮತದಾರರು ರಾಜಕಾರಣಿಗಳು ನೀಡುವ ಆಸೆ, ಆಮಿಷಗಳಿಗೆ ಒಳಗಾಗದೆ ತಮ್ಮ ಮತವನ್ನು ಮಾರಿಕೊಳ್ಳಬಾರದು, ಮತದಾನದ ಪವಿತ್ರತೆಯ ಬಗ್ಗೆ ನಿಮ್ಮ ಸುತ್ತಮುತ್ತಲಿನ ಜನರಿಗೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮೂಡಿಸಿದರು.
ತಾಪಂ ಇಒ ವಿ.ಕೃಷ್ಣಪ್ಪ ಮಾತನಾಡಿ, ಭಾರತಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳಲ್ಲಿ ಮತದಾನ ಮಾಡಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ಕಲ್ಪಿಸಿದ್ದಾರೆ. ಯುವ ಮತದಾರರು ಮತದಾನ ಮಾಡುವ ಹಕ್ಕನ್ನು ಚುನಾವಣಾ ಆಯೋಗ ೨೧ ವರ್ಷದಿಂದ ೧೮ ವರ್ಷಕ್ಕೆ ಕಡಿಮೆ ಮಾಡಿದೆ. ಇದರಿಂದ ಯುವಕರು ಹೆಚ್ಚು ಮತದಾನ ಮಾಡುತ್ತಿದ್ದಾರೆ, ಭಾರತ ಚುನಾವಣಾ ಆಯೋಗ ಶಾಲಾ- ಕಾಲೇಜುಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕ್ಲಬ್‌ಗಳನ್ನು ಮಾಡಲು ಅವಕಾಶ ಕಲ್ಪಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಒಂದು ದೊಡ್ಡ ಹಬ್ಬ. ನಾವೆಲ್ಲರೂ ಆ ಹಬ್ಬದಲ್ಲಿ ಮತದಾನದ ಮೂಲಕ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠ ಗೊಳಿಸಬೇಕು ಎಂದರು.ತಹಸೀಲ್ದಾರ್ ಎಂ.ವಿ.ರೂಪ ಅವರು ಯುವ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರಲ್ಲದೇ ಚುನಾವಣೆಯಲ್ಲಿ ಮತದಾನ ಮಾಡುವುದರ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಯುವ ಮತದಾರರಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ಹಾಗೂ ಮತದಾರರ ಗುರುತಿನ ಚೀಟಿ ವಿತರಿಸಿದರು.
ಉತ್ತಮ ಮತಗಟ್ಟೆ ಅಧಿಕಾರಿಗಳಾದ ಎ.ವೀಣಾ, ಎಸ್.ಎಚ್.ನಾರಾಯಣಸ್ವಾಮಿ, ಶ್ರೀನಿವಾಸ್ ಅವರಿಗೆ ಉತ್ತಮ ಬಿಎಲ್‌ಒ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ಸಂಪತ್ ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಬಿಎಲ್ ಒ ಸಂಘದ ಅಧ್ಯಕ್ಷ ಜಿ.ಮುನಿಯಪ್ಪ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ನಾರಾಯಣಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎಸ್. ಡಬ್ಲ್ಯೂ ವಿಭಾಗದ ಉಪನ್ಯಾಸಕ ಅನಂತರಾಜ್, ಚುನಾವಣಾ ಶಾಖೆಯ ಬಾಲಕೃಷ್ಣ, ನಂದೀಶ್, ಅನಂತರಾಜು ಸೇರಿ ಇನ್ನಿತರರು ಹಾಜರಿದ್ದರು.