ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಜ್ಯೋತಿ ಜೋಶಿ

| Published : Nov 18 2024, 12:02 AM IST

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ: ಜ್ಯೋತಿ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಆತ್ಮವಿಶ್ವಾಸ ತೋರಬೇಕು ಎಂದು ಜ್ಯೋತಿ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಆತ್ಮವಿಶ್ವಾಸ ತೋರಬೇಕು ಎಂದು ಜ್ಯೋತಿ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯ ಸಭಾಂಗಣದಲ್ಲಿ ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ಮೂಲಕ ವಿವಿಧ ಕಂಪನಿಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಆತ್ಮವಿಶ್ವಾಸದ ಬದುಕಿಗೆ ಸಹಕಾರಿಯಾಗಲಿದೆ. ಮಹಿಳೆಯರು ದುಡಿಯುವಂತಾಗಬೇಕು. ದುಡಿದು ಬದುಕಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಇದರಿಂದ ಆತ್ಮಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚಲಿದೆ. ಮಹಿಳೆಯರು ವೃತ್ತಿ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಆಗ ಯಾವುದೇ ಉದ್ಯಮ ಆರಂಭಿಸಿದರೂ ಯಶಸ್ಸು ಸಾಧಿಸಲು ಸಾಧ್ಯ. ಪಡೆದ ಯಾವುದೇ ತರಬೇತಿ ಪರಿಪೂರ್ಣವಾಗಬೇಕಾದರೆ ಮುಂದಿನ ಬದುಕಿಗೆ ಆದಾಯ ತರುವ ಮಾರ್ಗವಾಗಿ ಆ ತರಬೇತಿಯನ್ನು ರೂಪಿಸಿಕೊಳ್ಳಬೇಕು ಎಂದರು.

ಗ್ರಾಮ ವಿಕಾಸ ಸೊಸೈಟಿ ಸಿಇಓ ಜಗದೀಶ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಪ್ರಸ್ತಾವನೆ ಮೇರೆಗೆ ಓರಿಯಂಟ್ ಸಿಮೆಂಟ್, ಎನ್.ಎಲ್.ಸಿ., ಜೆಕೆ ಸಿಮೆಂಟ್, ಮೈ ಹೋಂ ಗ್ರುಪ್, ಜೆ.ಎಸ್.ಡಬ್ಲ್ಯೂ ಹಾಗೂ ಹಿಂಡಲಗಾ ಕಂಪನಿಗಳ ಪ್ರಯೋಜಕತ್ವ ಹಾಗೂ ಗ್ರಾಮ ವಿಕಾಸ ಸೊಸೈಟಿ ಅನುಷ್ಠಾನಗೊಳಿಸುತ್ತಿರುವ ಉಚಿತ ವೃತ್ತಿಪರ ತರಬೇತಿ ನೀಡುವುದರೊಂದಿಗೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ 2300 ಹೊಲಿಗೆ ಯಂತ್ರಗಳನ್ನು ಪ್ರಮಾಣ ಪತ್ರದೊಂದಿಗೆ ವಿತರಿಸಲಾಯಿತು. ಇದುವರೆಗೆ ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ 11,040 ಮಹಿಳೆಯರಿಗೆ ತರಬೇತಿ ನೀಡಿದ್ದು, ಅದರಲ್ಲಿ 5 ರಿಂದ 6 ಸಾವಿರ ಮಹಿಳೆಯರಿಗೆ ಜಾಬ್ ಆಫರ್ ನೀಡಲಾಗಿದೆ. ಈ ತರಬೇತಿಯಲ್ಲಿ ಮಹಿಳೆಯರು ತಯಾರಿಸಿದ ಸಿದ್ಧ ಉಡುಪಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದರು.

ಅಶ್ವಿನಿ ಅಲಾಟಗಿ ಮಾತನಾಡಿದರು. ಮುಕ್ತಾ ಯಡೆಹಳ್ಳಿ, ಪ್ರಿಯಾ, ಶ್ವೇತಾ ಹಕಪಕ್ಕಿ, ಅಸ್ಮಿತಾ ಕರ್ಕಣ್ಣವರ, ಮಧು, ಶ್ರೀಲಕ್ಷ್ಮಿ ಸೇರಿದಂತೆ ಹಲವರಿದ್ದರು.