ಸಾರಾಂಶ
ಹೈನುಗಾರಿಕೆಯಿಂದ ಸಾಮಾನ್ಯರು ಉತ್ತಮ ಬದುಕು ಸಾಗಿಸಲು ಸಾಧ್ಯ.ದೇಶಿ ತಳಿಗಳ ಅಭಿವೃದ್ಧಿಗೆ ಮತ್ತು ಹೈನೋದ್ಯಮಕ್ಕೆ ಹೆಚ್ಚು ಹೆಚ್ಚು ಉತ್ತೇಜನ ನೀಡುವ ಕಾರ್ಯಕ್ರಮಗಳು ಸರ್ಕಾರದಿಂದ ಆಗಬೇಕಾಗಿದೆ
ನರಗುಂದ: ಮಹಿಳೆಯರು ಕೃಷಿ ಜತೆಗೆ ಹೈನುಗಾರಿಕೆ ಮಾಡುವುದರಿಂದ ಸ್ವಾವಲಂಬಿಗಳಾಗಲು ಸಾಧ್ಯ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ದರಾಮ ಶ್ರೀಗಳು ಹೇಳಿದರು.
ಅವರು ಬುಧವಾರ ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರೆ ನಿಮಿತ್ತ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ ಪಶು ಆಸ್ಪತ್ರೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಮತ್ತು ಗುರುಬಸವ ಜನಕಲ್ಯಾಣ ಸಂಸ್ಥೆ ಇವುಗಳ ಆಶ್ರಯದಲ್ಲಿ ದೇಶಿಯ ಆಕಳು ಮತ್ತು ಕರು ಪ್ರದರ್ಶನ ಕಾರ್ಯಕ್ರಮವನ್ನು ಗೋಪೂಜೆ ಸಲ್ಲಿಸುವ ಮೂಲಕ ಜಾನುವಾರು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಹೈನುಗಾರಿಕೆಯಿಂದ ಸಾಮಾನ್ಯರು ಉತ್ತಮ ಬದುಕು ಸಾಗಿಸಲು ಸಾಧ್ಯ.ದೇಶಿ ತಳಿಗಳ ಅಭಿವೃದ್ಧಿಗೆ ಮತ್ತು ಹೈನೋದ್ಯಮಕ್ಕೆ ಹೆಚ್ಚು ಹೆಚ್ಚು ಉತ್ತೇಜನ ನೀಡುವ ಕಾರ್ಯಕ್ರಮಗಳು ಸರ್ಕಾರದಿಂದ ಆಗಬೇಕಾಗಿದೆ. ಈಗಾಗಲೇ ಹೈನುಗಾರಿಕೆಗೆ ಸಾಕಷ್ಟು ಪ್ರೋತ್ಸಾಹ ಧನ ಸರ್ಕಾರದಿಂದ ರೈತರಿಗೆ ದೊರೆಯುತ್ತಿದೆ ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹೆಚ್ಚು ಹಾಲು ನೀಡುವ 64 ಜಾನುವಾರುಗಳ ಮಾಲೀಕರಿಗೆ ಉಚಿತ ಹಾಲಿನ ಕ್ಯಾನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಸಿದ್ದಲಿಂಗ ಶ್ರೀಗಳು, ವೀರೇಶ್ವರ ಶ್ರೀಗಳು, ಪಶು ವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ ಸಣ್ಣಬಿದರಿ, ಉಪನಿರ್ದೇಶಕ ಡಾ.ಎಸ್. ಎಸ್. ಹೊಸಮಠ, ಲಾಲಸಾಬ್ ಅರಗಂಜಿ, ಶರಣಪ್ಪ ಕಾಡಪ್ನವರ, ವೀರಯ್ಯ ದೊಡ್ಮನಿ, ಉಮೇಶ್ ಮರಗುದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.