ಹಣ ಮಾಡುವುದು ವೈದ್ಯರ ಮುಖ್ಯ ಗುರಿಯಲ್ಲ: ಕುಪ್ಪೆ ಶ್ರೀನಿವಾಸ್

| Published : Jul 09 2024, 12:48 AM IST

ಹಣ ಮಾಡುವುದು ವೈದ್ಯರ ಮುಖ್ಯ ಗುರಿಯಲ್ಲ: ಕುಪ್ಪೆ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಆರೋಗ್ಯ ವಿಚಕ್ಷಣಾ ದಳ ಲೋಕಾಯುಕ್ತದಂತೆ ಕೆಲಸ ಮಾಡುತ್ತಿದೆ. ವೈದ್ಯಕೀಯ ಸೇವೆಯಲ್ಲಿನ ತಪ್ಪು ಹುಡುಕುವುದು ನಮ್ಮ ಮುಖ್ಯ ಗುರಿಯಲ್ಲ. ಬದಲಾಗಿ ವೈದ್ಯರ ಸೇವೆ ಹಾಗೂ ವೈದ್ಯಕೀಯ ಸವಲತ್ತುಗಳು ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಖ್ಯ ಗುರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಭಾರತ ವೈದ್ಯರಿಗೆ ಅತಿ ಹೆಚ್ಚು ಗೌರವ ಕೊಡುವ ದೇಶ. ಚಿಕಿತ್ಸೆಗಾಗಿ ಬರುವ ರೋಗಿಗಳಿಂದ ಸುಲಿಗೆ ಮಾಡಿ ಪಾಪದ ಹಣದಲ್ಲಿ ಬದುಕುವ ನೀಚ ಮಟ್ಟಕ್ಕೆ ವೈದ್ಯರು ಇಳಿಯಬಾರದು ಎಂದು ರಾಜ್ಯ ಆರೋಗ್ಯ ಇಲಾಖೆ ವಿಚಕ್ಷಣಾ ದಳದ ಅಧಿಕಾರಿ ಕುಪ್ಪೆ ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರಗೆ ಭೇಟಿ ನೀಡಿ ವೈದ್ಯಕೀಯ ಸೇವಾ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆ ವೈದ್ಯರು ಹಾಗೂ ಇತರ ಸಿಬ್ಬಂದಿ ಸಭೆ ನಡೆಸಿ ಮಾತನಾಡಿ, ಸಮಾಜದಲ್ಲಿ ಸುಲಿಗೆ ಮಾಡಲು ನಾವು ವೈದ್ಯಕೀಯ ಶಿಕ್ಷಣ ಪಡೆಯಬೇಕಾ?. ಹಣ ಪಡೆಯುವುದು ಮಾತ್ರ ಭ್ರಷ್ಟಾಚಾರವಲ್ಲ. ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸದೆ ವಂಚಿಸುವುದೂ ಕೂಡ ಭ್ರಷ್ಟಚಾರ ಎಂದು ಎಚ್ಚರಿಸಿದರು.

ನಾವು ನೀಡುವ ಸೇವೆಗಾಗಿ ಜನ ವೈದ್ಯರನ್ನು ದೇವರ ಸ್ಥಾನಕ್ಕೆ ಇಟ್ಟಿದ್ದಾರೆ. ವೈದ್ಯರು ಜನರ ಕಷ್ಠ ನಿವಾರಿಸುವ ದೇವರಾಗಬೇಕು. ನಮ್ಮ ಒಂದು ಚಿಕ್ಕ ಸೇವೆ ಸಾವಿರಾರು ಕುಟುಂಬಗಳ ಬಾಳಿನಲ್ಲಿ ದೀಪ ಬೆಳಗುತ್ತದೆ. ವೈದ್ಯರು ಸಮಾಜವನ್ನು ಬೆಳಗುವ ದೀಪಗಳಾಗಬೇಕು ಎಂದರು.

ರಾಜ್ಯ ಆರೋಗ್ಯ ವಿಚಕ್ಷಣಾ ದಳ ಲೋಕಾಯುಕ್ತದಂತೆ ಕೆಲಸ ಮಾಡುತ್ತಿದೆ. ವೈದ್ಯಕೀಯ ಸೇವೆಯಲ್ಲಿನ ತಪ್ಪು ಹುಡುಕುವುದು ನಮ್ಮ ಮುಖ್ಯ ಗುರಿಯಲ್ಲ. ಬದಲಾಗಿ ವೈದ್ಯರ ಸೇವೆ ಹಾಗೂ ವೈದ್ಯಕೀಯ ಸವಲತ್ತುಗಳು ಜನರಿಗೆ ತಲುಪುವಂತೆ ಮಾಡುವುದು ನಮ್ಮ ಮುಖ್ಯ ಗುರಿ ಎಂದರು.

ಹಣ ಮಾಡುವುದು ವೈದ್ಯರ ಮುಖ್ಯ ಗುರಿಯಲ್ಲ. ಗಾಂಧಿ, ಅಂಬೇಡ್ಕರ್, ವಿವೇಕಾನಂದರಂತಹ ಆದರ್ಶ ಪುರುಷರ ಬಳಿ ಹಣವಿರಲಿಲ್ಲ. ಆದರೆ, ಅವರ ಸೇವೆಯಿಂದ ಸಮಾಜಕ್ಕೆ ಬೆಳಕಾಗಿದೆ. ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ನಂಬಿಕೆ ಬರುವಂತೆ ಕೆಲಸ ಮಾಡಬೇಕು ಎಂದರು.

ನಾನು ಕೂಡ ರೈತನ ಮಗ. ಆಸ್ಪತ್ರೆಗಳ ಸುಧಾರಣೆ ಮತ್ತು ಆಸ್ಪತ್ರೆಗೆ ಬರುವ ಬಡ ರೈತರ ಬಗ್ಗೆ ನಾನು ಸದಾ ಯೋಚಿಸುತ್ತೇನೆ. ನಾನು ಮೊದಲು ದೇಶದ ಒಬ್ಬ ನಾಗರೀಕ. ಆ ನಂತರ ಸರ್ಕಾರಿ ಅಧಿಕಾರಿ. ಬಡ ರೈತರು ಖಾಸಗಿ ಚಿಕಿತ್ಸೆಗೆ ಹೋದರೆ ತಮ್ಮ ಮನೆ ಮಠ ಮಾರಿಕೊಳ್ಳಬೇಕಾಗಿದೆ. ಶೇ.05 ರಷ್ಟು ಕರ್ತವ್ಯ ಲೋಪ ವೈದ್ಯಕೀಯ ಸಿಬ್ಬಂದಿಯಿಂದ ಆರೋಗ್ಯ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಆಸ್ಪತ್ರೆ ನಮ್ಮದಲ್ಲ. ಬದಲಾಗಿ ಅದು ಸಾರ್ವಜನಿಕರಿಗೆ ಸೇರಿದ್ದು. ನಿಮ್ಮನ್ನು ಹುಡುಕಿಕೊಂಡು ರೋಗಿಗಳು ಬರುವುದರಿಂದಲೇ ನಿಮಗೆ ವೈದ್ಯಕೀಯ ವೃತ್ತಿ ದೊರಕಿದೆ. ಆಸ್ಪತ್ರೆಗಳಲ್ಲಿ ಜನರಿಗೆ ಗುಣಾತ್ಮಕ ಚಿಕಿತ್ಸೆ ನೀಡುವ ಮೂಲಕ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರಿಗೆ ನಂಬಿಕೆ ಹುಟ್ಟಿಸಬೇಕೆಂದು ಕರೆ ನೀಡಿದರು.

ರೋಗಿಗಳ ಮುಂದೆ ಕೈಚಾಚಿದರೆ ನಮ್ಮ ಮಾನವನ್ನು ನಾವು ಮಾರಿಕೊಂಡಂತೆ. ಪ್ರೀತಿ ಮತ್ತು ದಯೆ ನಮ್ಮ ರಕ್ತದಲ್ಲಿರಬೇಕು. ಆಸ್ಪತ್ರೆಗೆ ಬರುವ ರೋಗಿಯ ಜೊತೆ ಸೌಜನ್ಯದಿಂದ ವರ್ತಿಸಬೇಕು. ನಗು ಆರೋಗ್ಯದ ಲಕ್ಷಣ. ವೈದ್ಯರು ಸದಾ ನಗುಮುಖದಿಂದ ಸೇವೆ ಸಲ್ಲಿಸಲು ದೇವರು ನಮಗೆ ಕೊಟ್ಟಿರುವ ಅವಕಾಶ. ಇದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯರ ಹೆರಿಗೆಯಿಂದ ಹಿಡಿದು ಪ್ರತಿಯೊಂದು ಚಿಕಿತ್ಸೆಗೂ ಸರ್ಕಾರದಿಂದ ಹಣ ಬರುತ್ತದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರದಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 1.45 ಕೋಟಿ ರು. ಹಣ ಬಂದಿದೆ ಎಂದರು.

ರಾಜ್ಯ ಸರ್ಕಾರವೂ ವಾರ್ಷಿಕ 30-40 ಲಕ್ಷ ಹಣವನ್ನು ಆಸ್ಪತ್ರೆಯ ಸೇವಾ ವ್ಯವಸ್ಥೆಗೆ ನೀಡುತ್ತಿದೆ. ಇಲ್ಲಿನ ಆದಾಯದ ಹಣ ಬಳಕೆ ಮಾಡಿ ಪಾರದರ್ಶಕ ಟೆಂಡರ್ ಮೂಲಕ ನೇರವಾಗಿ ಔಷಧಿ ಕಂಪನಿಗಳ ಮೂಲಕವೇ ಅಗತ್ಯ ಔಷಧಿಗಳನ್ನು ಕಡಿಮೆ ಬೆಲೆಗೆ ಖರೀದಿಸಿ ರೋಗಿಗಳಿಗೆ ನೀಡಬಹುದು ಎಂದರು.

ಎಲ್ಲಾ ಬಗೆಯ ಔಷಧಿಗಳೂ ಆಸ್ಪತ್ರೆಯಲ್ಲಿ ಲಭ್ಯವಿದೆ. ವೈದ್ಯರು ಯಾವುದೇ ಕಾರಣಕ್ಕೂ ಹೊರಗಿನ ಔಷಧಿ ಅಂಗಡಿಗಳಿಗೆ ಚೀಟಿ ಬರೆಯಬಾರದು. ಆಸ್ಪತ್ರೆಗೆ ಬರುವ ಎಲ್ಲಾ ನಾಗರೀಕರಿಗೂ ಸರ್ಕಾರಿ ಸವಲತ್ತಿನ ಬಗ್ಗೆ ಅರಿವು ಮೂಡಿಸಿ ಎಂದು ಕರೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಸೋಮಶೇಖರ್, ತಾಲೂಕು ಆರೋಗ್ಯಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್ ಸೇರಿದಂತೆ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.