ಸ್ವಯಂ ಉದ್ಯೋಗಪತಿ ಆಗುವ ಅವಕಾಶಗಳ ಸದ್ಬಳಕೆ ಮುಖ್ಯ

| Published : Feb 22 2024, 01:45 AM IST

ಸಾರಾಂಶ

ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯವಾದುದು. ವಿದ್ಯಾರ್ಥಿ ಬದುಕು ಸಣ್ಣದಿರಬಹುದು, ಆದರೆ ದೊರೆತ ಅವಕಾಶ ಸಣ್ಣದಲ್ಲ. ವಿದ್ಯಾರ್ಥಿಗಳ ಆಲೋಚನಾ ಲಹರಿ ವಿಶಾಲವಾಗಿರಬೇಕು. ಇದರಿಂದ ಸಮಾಜಕ್ಕೆ ಒಳಿತು ಉಂಟಾಗುವಂತಿರಬೇಕು. ಆ ರೀತಿಯಲ್ಲಿ ಭವಿಷ್ಯದ ಕನಸನ್ನು ಕಾಣಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಪ್ರಬಂಧಕ ಅಮರನಾಥ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯವಾದುದು. ವಿದ್ಯಾರ್ಥಿ ಬದುಕು ಸಣ್ಣದಿರಬಹುದು, ಆದರೆ ದೊರೆತ ಅವಕಾಶ ಸಣ್ಣದಲ್ಲ. ವಿದ್ಯಾರ್ಥಿಗಳ ಆಲೋಚನಾ ಲಹರಿ ವಿಶಾಲವಾಗಿರಬೇಕು. ಇದರಿಂದ ಸಮಾಜಕ್ಕೆ ಒಳಿತು ಉಂಟಾಗುವಂತಿರಬೇಕು. ಆ ರೀತಿಯಲ್ಲಿ ಭವಿಷ್ಯದ ಕನಸನ್ನು ಕಾಣಬೇಕು ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಪ್ರಬಂಧಕ ಅಮರನಾಥ ಹೇಳಿದರು.

ಬುಧವಾರ ಎಸ್‌ಜೆಪಿಐ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಆರ್‌ಬಿಐ ಬೆಂಗಳೂರು, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಶಿವಮೊಗ್ಗ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಶ್ರಯದಲ್ಲಿ ಆರ್‌ಬಿಐ ಆರ್ಥಿಕ ಸಾಕ್ಷರತಾ ಸಪ್ತಾಹ, ಅರಿವು ಹಾಗೂ ನಗದುರಹಿತ ವ್ಯವಹಾರದಲ್ಲಿ ಸೈಬರ್ ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶಿಕ್ಷಣ ಮುಗಿಸಿ, ದೇಶದ ಯಾವುದೇ ಜಾಗದಲ್ಲಿ ವಿದ್ಯಾರ್ಥಿಗಳು ಕೌಶಲ್ಯ ಬಳಕೆ ಮಾಡಬಹುದಾಗಿದೆ. ಸತತ 20 ವರ್ಷಗಳ ವಿದ್ಯಾಭ್ಯಾಸ ಪ್ರತಿಫಲವಾಗಿ ಯಾವುದೇ ಕೈಗಾರಿಕಾ ಘಟಕ ಪ್ರಾರಂಭಿಸಲು ಅವಕಾಶವಿದೆ. ಬ್ಯಾಂಕುಗಳಿಂದ ಕೈಗಾರಿಕಾ ಘಟಕಗಳಿಗೆ ಸಾಲ ಸೌಲಭ್ಯವಿದೆ. ಸಣ್ಣ ಕೈಗಾರಿಕಾ ಘಟಕ ಆರಂಭಿಸಿ ಸ್ವಯಂ ಉದ್ಯೋಗಪತಿ ಆಗುವ ಅವಕಾಶ ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಇಂದಿನ ಉಳಿತಾಯ ಮುಂದಿನ ಜೀವನದ ಆಪತ್ಕಾಲದಲ್ಲಿ ಸಂರಕ್ಷಣೆ ಮಾಡುತ್ತದೆ. ಆರ್‌ಬಿಐ ದೇಶದ ಎಲ್ಲ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ, ಮಾರ್ಗದರ್ಶನ ಮಾಡುತ್ತದೆ. ಸೈಬರ್ ವಂಚನೆ ತಡೆಯಲು ಮೊಬೈಲ್‌ನಲ್ಲಿ ಥಂಬ್ ಕೊಡುವ ರೀತಿ ಪಾಸ್‌ವರ್ಡ್‌ ಇಟ್ಟುಕೊಳ್ಳಿ. ಎಟಿಎಂ ಮತ್ತು ಹಣ ವರ್ಗಾವಣೆಗೆ ಕಡಿಮೆ ಮಿತಿ ನಿಗದಿಪಡಿಸಿದಾಗ ಹಣ ದುರುಪಯೋಗ ಸಾಧ್ಯವಿಲ್ಲ. ಜಾಗರೂಕತೆಯಿಂದ ವ್ಯವಹರಿಸಿದಲ್ಲಿ ಆರ್ಥಿಕ ಸಾಕ್ಷರತೆಯ ಅರಿವು ಪಡೆದಂತೆ ಎಂದು ತಿಳಿಸಿದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಮರಣದವರೆಗೆ ನಿತ್ಯ ಹಣ ಬಹು ಮಹತ್ವದ ಪಾತ್ರ ವಹಿಸುತ್ತದೆ. ಈ ದಿಸೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕ ಸಾಕ್ಷರನಾಗಬೇಕು, ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ, ಜಾಣ್ಮೆಯಿಂದ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಸಂಸ್ಥೆಯ ಪ್ರಾಚಾರ್ಯ ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ಜೀವನಕ್ಕೆ ಬ್ಯಾಂಕಿನ ವ್ಯವಹಾರ ಪ್ರಮುಖ ಪಾತ್ರ ವಹಿಸುತ್ತದೆ. ಐಟಿಐ ಶಿಕ್ಷಣ ಪೂರ್ಣಗೊಳಿಸಿದ ನಂತರ ಸ್ವಂತ ಉದ್ಯೋಗಕ್ಕೆ ಬ್ಯಾಂಕಿನ ವ್ಯವಹಾರ ಆರ್ಥಿಕ ಸಾಕ್ಷರತೆ ಬಹುಮುಖ್ಯವಾಗಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಬ್ಯಾಂಕುಗಳ ಮುಖಾಂತರ ಪಡೆದುಕೊಂಡು ಘಟಕ ಪ್ರಾರಂಭಿಸಿದರೆ ಶಿಕ್ಷಣದ ಧ್ಯೇಯ ಮನೆಯವರ ಆಸೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಪ್ರತಿಭಾನ್ವಿತ ಹತ್ತು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ತರಬೇತಿ ಅಧಿಕಾರಿ ಸೋಮಸುಂದರಂ ಸ್ವಾಗತಿಸಿ, ಲಿಂಗೇಶ್ ನಿರೂಪಿಸಿ. ವಂದಿಸಿದರು.

- - - -21ಕೆಎಸ್.ಕೆಪಿ2:

ಐಟಿಐ ಕಾಲೇಜಿನಲ್ಲಿ ನಡೆದ ಆರ್ಥಿಕ ಸಾಕ್ಷರತೆ ಅರಿವು ನಗದುರಹಿತ ವ್ಯವಹಾರ, ಸೈಬರ್ ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಪ್ರಬಂಧಕ ಅಮರನಾಥ ಉದ್ಘಾಟಿಸಿದರು.