ಸಾರಾಂಶ
ಧಾರವಾಡ:
ಮಾಳಮಡ್ಡಿಯ ಮನೆಯೊಂದರಲ್ಲಿ ಚಂದ್ರಶೇಖರ ಕೊಲ್ಲಾಪೂರ ಎಂಬುವರ ಶವವು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸಂಗತಿಗಳು ಬಯಲಾಗುತ್ತಿವೆ.ತಮ್ಮ ಚಿಕ್ಕಪ್ಪ ಚಂದ್ರಶೇಖರ ಕೊಲ್ಲಾಪೂರ ನನ್ನ ಹೆಸರಿನಲ್ಲಿ ಮೃತ್ಯು ಪತ್ರ ಬರೆದಿಟ್ಟು ಮೃತರಾಗಿದ್ದಾರೆ. ಮೃತರ ಆಸ್ತಿ ತಮಗೆ ಸೇರಿದ್ದು ಎಂದು ಹೇಳಿಕೊಂಡು ಇತ್ತೀಚೆಗೆ ದಾಖಲೆ ಸಮೇತ ಸುದ್ದಿಗೋಷ್ಠಿ ನಡೆಸಿದ್ದ ಯಶವಂತ ಪಾಟೀಲ, ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಚಂದ್ರಶೇಖರ ಅವರ ತಾಯಿ ಹಾಗೂ ಅವರ ಊರಿನ ಹಿರಿಯರೊಂದಿಗೆ ದಾಖಲೆ ಸಮೇತ ಆರೋಪಿಸಿದ್ದು ಇದೀಗ ಹೊಸ ಸಂಗತಿ.
ಮೃತ್ಯುಪತ್ರವನ್ನು ಪರಿಶೀಲಿಸಲಾಗಿ ಬಾಂಡ್ ಪೇಪರ್‌ನಲ್ಲಿ ಎಲ್ಲೂ ವಿಲ್ ಎಂದು ನಮೂದಿಸಿಲ್ಲ. ಬದಲಾಗಿ ಅಗ್ರಿಮೆಂಟ್ ಎಂತಿದೆ. ಮೃತ ಚಂದ್ರಶೇಖರ ಹೆಸರಿನಲ್ಲಿ 2020ರ ಮಾರ್ಚ್ 23ರಂದು ಸಿಟಿಎಸ್ ಉತಾರದಲ್ಲಿ ದಾಖಲಾಗುತ್ತದೆ. ಇದಕ್ಕೂ ಮುಂಚೆ ಯಶವಂತ ಪಾಟೀಲ ಅವರು ನೀಡಿರುವ ಮೃತ್ಯು ಪತ್ರದ ದಾಖಲೆ ಸಿದ್ಧವಾಗಿದ್ದು 2016ರ ಜನವರಿ 19. ಇದು ಹೇಗೆ ಸಾಧ್ಯ? ಇದಕ್ಕಿಂತ ಮುಖ್ಯವಾಗಿ ಚಂದ್ರಶೇಖರ ಸಹಿ, ನೋಟರಿ ವಕೀಲ ಬಿ.ಜಿ. ಪಾಟೀಲ ಹಾಗೂ ಸದರಿಯವರು ನನಗೆ ಪರಿಚಯ ಎಂದಿರುವ ವಕೀಲ ಕೆ.ಜಿ. ಕಮಲಾಪೂರ ಅವರ ಸಹಿಗಳು ಅವರ ಸಹಿಗಳೇ ಅಲ್ಲ ಎಂಬುದನ್ನು ಅವರು ಬೇರೆ ಬೇರೆ ನೋಟರಿಗಳಲ್ಲಿ ಮಾಡಿರುವ ಸಹಿ ಪರಿಶೀಲಿಸಲಾಗಿ ತಿಳಿದು ಬಂದಿದೆ. ಜತೆಗೆ ಮೃತ್ಯುಪತ್ರ ನೋಟರಿಯವರ ಪುಸ್ತಕದಲ್ಲಿ ನೋಂದಣಿಯೂ ಆಗಿಲ್ಲ ಎಂದ ಮೇಲೆ ಮೃತ್ಯು ಪತ್ರ ಖೊಟ್ಟಿ ಎನಿಸುವುದಲ್ಲವೇ ಎಂದು ಕೊರವರ ಪ್ರಶ್ನಿಸಿದರು.ಜತೆಗೆ ಈ ಖೊಟ್ಟಿ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ವಿದ್ಯಾಗಿರಿ ಠಾಣೆ ಪೊಲೀಸರು ತನಿಖೆ ನಡೆಸಬೇಕು. ಈ ಬಗ್ಗೆ ಸದ್ಯದಲ್ಲಿಯೇ ದೂರು ಸಹ ನೀಡಲಾಗುವುದು. ಇದಲ್ಲದೇ, ಆಸ್ತಿ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುವ ಯಶವಂತ ಪಾಟೀಲಗೆ ಮೃತ ಚಂದ್ರಶೇಖರಗೆ ತಾಯಿ ಹಾಗೂ ಸಂಬಂಧಿಕರು ಇರುವ ಸಂಗತಿ ಗೊತ್ತಿದ್ದರೂ, ಅನಾಥ ಎಂದು ಹೇಳಿಕೆ ನೀಡಿದ್ದಾನೆಂದು ಮೃತನ ತಾಯಿ ಮಲ್ಲಮ್ಮ ಸ್ಪಷ್ಟಪಡಿಸಿದರು.
ಯಶವಂತ ಪಾಟೀಲ ಎಂಬಾತ ಸುದ್ದಿಗೋಷ್ಠಿ ನಡೆಸಿ ಚಂದ್ರಶೇಖರಗೆ ತಾಯಿಯೇ ಇಲ್ಲ ಕವಲಗೇರಿಯಲ್ಲಿರುವ ಮಲ್ಲಮ್ಮ ಮಲತಾಯಿ ಎಂದು ಹೇಳಿದ್ದಾರೆ. ಈ ಸಂಗತಿ ಹೆತ್ತ ತಾಯಿಯಾದ ನನಗೆ ತೀವ್ರ ಬೇಸರ ಮೂಡಿಸಿತು. ನನಗೆ ಈಗ 80 ವರ್ಷ. ಆತನ ಆಸ್ತಿ ಬೇಡ. ಆತನ ಸಾವಿಗೆ ನ್ಯಾಯ ಬೇಕು ಎಂದು ಮಲ್ಲಮ್ಮ ಕಣ್ಣೀರು ಸುರಿಸಿದರು.ಸಂಶಯಾಸ್ಪದ ಮೇಲೆ ಚಂದ್ರಶೇಖರ ಮೃತನಾಗಿದ್ದು, ಇದು ನಮ್ಮದೇ ಆಸ್ತಿ ಎಂದುಕೊಳ್ಳುತ್ತಿರುವ ಯಶವಂತ ಪಾಟೀಲ ಜೊತೆಗೆ ವಿನೋದಾ ಶಾಬುದ್ದೀನ ಮೇಲೆ ತೀವ್ರ ಸಂಶಯವಿದ್ದು ವಿದ್ಯಾಗಿರಿ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಅವರ ಸಾವಿನ ರಹಸ್ಯ ಬಯಲಿಗೆ ತರಬೇಕು. ಜತೆಗೆ ಖೊಟ್ಟಿ ದಾಖಲೆ ಸೃಷ್ಟಿಸಿದರ ಮೇಲೂ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕವಲಗೇರಿ ಗ್ರಾಮದ ಹಿರಿಯರು ಇದ್ದರು.