ದಸರಾ ಖುಷಿಯಲ್ಲಿದ್ದ ರೈತರಿಗೆ ಸಂಕಷ್ಟ ತಂದ ಮಲಪ್ರಭಾ ಪ್ರವಾಹ

| Published : Oct 13 2024, 01:08 AM IST

ದಸರಾ ಖುಷಿಯಲ್ಲಿದ್ದ ರೈತರಿಗೆ ಸಂಕಷ್ಟ ತಂದ ಮಲಪ್ರಭಾ ಪ್ರವಾಹ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆಆಲೂರಿನಿಂದ ಬಾದಾಮಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಜಲಾವೃತ

ಗದಗ/ ಹೊಳೆಆಲೂರ: ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಸುರಿದ ಭಾರೀ ಮಳೆಗೆ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿಗೆ ತೀವ್ರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಕಟಾವು ಹಂತಕ್ಕೆ ಬಂದಿದ್ದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳು ತೀವ್ರ ಹಾನಿಯಾಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾ ಸ್ಥಿತಿ ನಿರ್ಮಾಣವಾಗಿದೆ.

ಬೆಣ್ಣೆ ಹಳ್ಳದ ಪ್ರವಾಹ ಹಾಗೂ ಮಲಪ್ರಭಾ ನದಿಗೆ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿದ್ದು, ನದಿ ಪಾತ್ರದ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಕಟಾವು ಹಂತಕ್ಕೆ ಬಂದ ಗೋವಿನ ಜೋಳ ನದಿ ಹಾಗೂ ಬೆಣ್ಣಿ ಹಳ್ಳದ ನೀರಲ್ಲಿ ತೆಲಾಡುತ್ತಿವೆ. ಈಗ ಬಿತ್ತಿದ ಕಡಲೆ, ಜೋಳ, ಗೋದಿ ನಾಶವಾಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಖುಷಿಯಲ್ಲಿದ್ದ ನದಿ ಪಾತ್ರದ ರೈತರ ಕಣ್ಣಲ್ಲಿ ನೀರು ತರಿಸಿದೆ.

ಹೊಳೆಆಲೂರ ಸೇರಿದಂತೆ ಹೋಬಳಿಯ ಮೆಣಸಗಿ, ಗುಳಗಂದಿ, ಹೊಳೆಮಣ್ಣೂರ, ಗಾಡಗೋಳಿ, ಅಸೂಟಿ, ಮಾಳವಾಡ, ಕರಮುಡಿ, ಕೂರವಿನಕೊಪ್ಪ, ಹೊಳೆಹಡಗಲಿ, ಅಮರಗೋಳ, ಬಸರಕೋಡ, ಬಿ.ಎಸ್.ಬೇಲೇರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ರೈತರ ಬೆಳೆಗಳು ಬೆಣ್ಣಿ ಹಳ್ಳ ಹಾಗೂ ಮಲಪ್ರಭಾ ನದಿ ನೀರಿನಲ್ಲಿ ತೆಲಾಡುತ್ತಿವೆ. ಜಮೀನಿನಲ್ಲಿ ಕೊಳೆಯುತ್ತಿರುವ ಬೆಳೆ ನೋಡಿ ರೈತರು ಮಮ್ಮಲ ಮರಗುತ್ತಿದ್ದು, ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಈ ಭಾಗದಲ್ಲಿ ರೈತರು ಬೆಳೆ ಕಟಾವು ಮಾಡಲು ತಯಾರಿ ನಡೆಸಿದರೆ, ಕೆಲವು ರೈತರು ತೆನೆ ಕಿತ್ತು ಹಾಕಿ, ಅದನ್ನು ಒಂದಡೆ ಕೂಡಿಸಿ ಮಶೀನ್ ಹಾಕುವ ಸಿದ್ಧತೆಯಲ್ಲಿದ್ದರು. ಇನ್ನೂ ಕೆಲವು ರೈತರ ಗೋವಿನ ಜೋಳ ನದಿ ನೀರಿನ ಒಡಲಲ್ಲಿ ಕೊಳೆಯುತ್ತಿದ್ದು, ನೀರಿನಲ್ಲಿ ತೆನೆ ಪುಟ್ಟಿಯಲ್ಲಿ ತಂದು ಬೇರೆಡೆ ಹಾಕುತ್ತಿದ್ದಾರೆ. ಅತೀ ಆಳ ಇದ್ದ ಜಮೀನಿನ ರೈತರ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈಗ ಹಿಂದೆ ಬಿದ್ದ ಮಳೆಗೆ ಜೋಳ, ಗೋದಿ, ಕಡಲೆ ಬಿತ್ತನೆ ಮಾಡಿದ್ದು, ಈಗ ಅದು ನೀರಿನಲ್ಲಿ ಹೋಮ ಮಾಡಿದಂತಾಗಿದೆ.

3 ತಿಂಗಳಲ್ಲಿ 4 ಬಾರಿ ಬೆಳೆ ಹಾಳು: ರೈತರು ಸಮಸ್ಯೆ ಅನುಭವಿಸುತ್ತಿರುವುದು ಇದೇ ಮೊದಲೇನಲ್ಲ. ಪ್ರಸಕ್ತ ಸಾಲಿನಲ್ಲಿ 4 ಬಾರಿ ರೈತರ ಬೆಳೆ ನಾಶವಾಗಿವೆ. ಒಬ್ಬೊಬ್ಬ ರೈತ ಪ್ರವಾಹ ಬಂದು ಹೋದ ಮೇಲೆ ಪ್ರತಿ ಬಾರಿ ಸಾಲ ಮಾಡಿ ಬಿತ್ತಿ ಕೈಸುಟ್ಟುಕೊಂಡಿದ್ದಾನೆ. ಇಷ್ಟು ಬಾರಿ ರೈತರ ಬೆಳೆ ನಾಶವಾದರೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ ಎನ್ನುತ್ತಾರೆ ಗ್ರಾಪಂ ಸದಸ್ಯ ಹಾಗೂ ಪ್ರಗತಿಪರ ರೈತ ಕೇದಾರಗೌಡ ಮಣ್ಣೂರ.

ನದಿ ಅಗಲೀಕರಣಕ್ಕೆ ಒತ್ತಾಯ: ಮಲಪ್ರಭಾ ನದಿಗೆ ₹ 20 ಸಾವಿರ ಕ್ಯೂಸೆಕ್ ನೀರನ್ನು ಬಿಟ್ಟರೂ ಅದು ನದಿ ಒಡಲಲ್ಲೆ ಹರಿದು ಹೋಗುತ್ತಿತ್ತು. ಆದರೆ ಈಗ ನದಿಯಲ್ಲಿ ಜಾಲಿ ಕಂಟಿ ಬೆಳೆದು ಜಮೀನು ಅಲ್ಲಲ್ಲಿ ಅತಿಕ್ರಮಣವಾಗಿವೆ. ಕೇವಲ 5 ರಿಂದ 10 ಸಾವಿರ ಕ್ಯೂಸೆಕ್ ನೀರು ಬಿಟ್ಟರೂ ಜಮೀನುಗಳು ಮುಳುಗಡೆಯಾಗಿ ರೈತ ಸಮುದಾಯ ಸಂಕಷ್ಟ ಅನುಭವಿಸುತ್ತಾರೆ. 3 ತಿಂಗಳಲ್ಲಿ 4 ಬಾರಿ ರೈತರ ಜಮೀನು ಹಾಳಾದರು ರೈತರಿಗೆ ₹1 ಪರಿಹಾರ ಕೊಟ್ಟಿಲ್ಲ. ನಮಗೆ ನದಿ ಅಗಲೀಕರಣ ಮಾಡಿ ಪರಿಹಾರ ಕೊಡಿ, ಇಲ್ಲವಾದರೆ ರೈತರೊಂದಿಗೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಹೊಳೆಆಲೂರು, ಅಮರಗೋಳ ಗ್ರಾಪಂ, ಹೊಳೆಮಣ್ಣೂರ, ಮೆಣಸಗಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನದಿ ಹತ್ತಿರ ಹೋಗದಂತೆ ಪಂಚಾಯಿತಿ ಸಿಬ್ಬಂದಿಗಳಿಂದ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗಿದೆ. ನದಿಗೆ ಹೊಂದಿಕೊಂಡಿರುವ ಪಂಪ್ಸೆಟ್, ಮೋಟಾರು ಇತರೆ ಸಾಮಗ್ರಿ ಸುರಕ್ಷಿತ ಸ್ಥಳಗಳಿಗೆ ರವಾನಿಸುವಂತೆ ತಿಳಿಸಿದೆ. ಜನ ಜಾನುವಾರು ಸಮೇತ ಯಾರೂ ಹೋಗದಂತೆ ಗ್ರಾಮದ ಜನರಲ್ಲಿ ಮನವಿ ಮಾಡಲಾಗಿದೆ ಎಂದು ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಳೆಆಲೂರಿನಿಂದ ಬಾದಾಮಿ ತಾಲೂಕಿನ ಗ್ರಾಮಗಳಿಗೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಜಲಾವೃತಗೊಂಡಿದ್ದು, ಈ ಗ್ರಾಮಗಳಿಗೆ ಹೋಗುವ ಪ್ರಯಾಣಿಕರು ರೇಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗಬೇಕಾಗಿದೆ. ರೋಣ, ಬಾದಾಮಿ ಮಾರ್ಗವಾಗಿಯೂ ಸಂಚರಿಸುತ್ತಿದ್ದಾರೆ. ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು ಮೆಣಸಗಿ ಹತ್ತಿರವಿರುವ ಸೇತುವೆ ಮುಳುಗಡೆಯಾಗಿದೆ.

ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು, ಮಲಪ್ರಭಾ ನದಿಗೆ ನೀರು ಬಿಟ್ಟಿದ್ದಾರೆ. 4 ಸಾರಿ ಜಮೀನಿಗೆ ನೀರು ಬಂದು ಬೆಳೆ ನಾಶವಾದರೂ ₹1 ಪರಿಹಾರ ಬಂದಿಲ್ಲ. ನದಿ ಅಗಲೀಕರಣ ಮಾಡಲು ರೈತರ ಒತ್ತಾಯವಿದೆ. ಸಾಲಸೋಲ ಮಾಡಿದ ರೈತರಿಗೆ ಪರಿಹಾರ ಕೊಡದಿದ್ದರೆ ಹೋರಾಟ ಅನಿವಾರ್ಯ ಎಂದು ಮೆಣಸಗಿ ಗ್ರಾಪಂ ಸದಸ್ಯ ಕೇದಾರಗೌಡ ಮಣ್ಣೂರ ಹೇಳಿದರು.