ಪ್ರಸಕ್ತ ವರ್ಷ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದೆ. ಮತ್ತೊಂದು ಕಡೆ ಕೆರೆ ತುಂಬಿಕೊಳ್ಳಲೆಂದು ಮಲಪ್ರಭೆ ಜಲಾಶಯದಿಂದ ನೀರು ಬಿಟ್ಟರೂ ಕೂಡ ಅದು ಕೃಷಿ ಹೊಂಡಗಳಿಗೆ ಮುಟ್ಟದೆ ಕೆರೆಗಳು ಖಾಲಿ ಖಾಲಿಯಾಗಿವೆ.
ಕೆರೆಗಳು ಖಾಲಿ ಖಾಲಿ । ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಕೊಟ್ಟ ಮಳೆ
ಎಸ್.ಜಿ. ತೆಗ್ಗಿನಮನಿ
ಕನ್ನಡಪ್ರಭ ವಾರ್ತೆ ನರಗುಂದಪ್ರಸಕ್ತ ವರ್ಷ ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದೆ. ಮತ್ತೊಂದು ಕಡೆ ಕೆರೆ ತುಂಬಿಕೊಳ್ಳಲೆಂದು ಮಲಪ್ರಭೆ ಜಲಾಶಯದಿಂದ ನೀರು ಬಿಟ್ಟರೂ ಕೂಡ ಅದು ಕೃಷಿ ಹೊಂಡಗಳಿಗೆ ಮುಟ್ಟದೆ ಕೆರೆಗಳು ಖಾಲಿ ಖಾಲಿಯಾಗಿವೆ.
ಸರ್ಕಾರ ಬಯಲುಸೀಮೆ ರೈತರಿಗೆ, ಅಲ್ಪಸ್ವಲ್ಪ ಮಳೆಯಾದರೆ ಆ ನೀರು ಈ ಕೃಷಿ ಹೊಂಡದಲ್ಲಿ ಸಂಗ್ರಹಿಸಿಕೊಂಡು ಮಳೆ ಅಭಾವವಾದಾಗ ಆ ನೀರನ್ನು ಜಮೀನುಗಳಿಗೆ ಬಳಕೆ ಮಾಡಿಕೊಳ್ಳಲು ಅನುಕೂಲವಾಗಲೆಂದು ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಟ್ಟಿದೆ. ಆದರೆ ಮಳೆಯಿಲ್ಲದೆ ಕೃಷಿ ಹೊಂಡಗಳು ಬರಿದಾಗಿವೆ.ಹೊಂಡಕ್ಕೆ ಬಾರದ ಡ್ಯಾಮ್ ನೀರು:
ಈ ವರ್ಷ ಮುಂಗಾರು ಹಂಗಾಮಿನ ಎಲ್ಲಾ ಮಳೆಗಳು ಸಂಪೂರ್ಣ ಕೈ ಕೊಟ್ಟಿವೆ. ಕಾಲುವೆ ಮೂಲಕ ಜಲಾಶಯದ ನೀರು ಪೂರೈಕೆ ಮಾಡಿ ಈ ಕೃಷಿ ಹೊಂಡ ತುಂಬಿಸಬೇಕೆಂದು ಜಲಾಶಯದ ನೀರು ಕಾಲುವೆಗಳಿಗೆ ಬಿಟ್ಟಿದ್ದರು. ಆದರೆ ನೀರು ಈ ತಾಲೂಕಿನ ಕಾಲುವೆಗಳಿಗೆ ಮುಟ್ಟದ್ದರಿಂದ ಕೃಷಿ ಹೊಂಡ ಕೆರೆಗಳು ಬಿಕೋ ಎನ್ನುತ್ತಿವೆ.ತಾಲೂಕಿನಲ್ಲಿ ಕಾಲುವೆಗೆ ಹೊಂದಿಕೊಂಡಿರುವ ನೀರಾವರಿ ಜಮೀನು ಹೊಂದಿರುವ ಬಹುತೇಕ ರೈತರು ತಮ್ಮ ಕೃಷಿ ಹೊಂಡ ತೆಗಿಸಿದ್ದಾರೆ. ಮಳೆಯಿಂದ ತುಂಬದ ಕೆರೆಗಳನ್ನು ಜಲಾಶಯದಿಂದ ತುಂಬಿಸಬೇಕೆಂದು ಜಲಾಶಯದಿಂದ ಕಾಲುವೆ ಮೂಲಕ ನೀರು ಬಿಟ್ಟು ತುಂಬಿಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲೆಂದು ನೀರು ಬಿಟ್ಟರೂ ಪ್ರಯೋಜನವಾಗಲಿಲ್ಲ.
ಕೆರೆಗಳ ವಿವರ:ತಾಲೂಕಿನಲ್ಲಿ ಸರ್ಕಾರ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ 2023ರಿಂದ 2026ವರಗೆ ರೈತರಿಗೆ ಕೃಷಿ ಇಲಾಖೆಯಿಂದ 275, ತೋಟಗಾರಿಕೆ ಇಲಾಖೆಯಿಂದ 34 ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿದೆ. ಈ ವರ್ಷ ಮಳೆ ಇಲ್ಲದೆ ಕೆರೆಗಳು ಬತ್ತಿವೆ.
3 ಟಿಎಂಸಿ ನೀರು ಕಾಲುವೆಗೆ:ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಸರ್ಕಾರ ಜಲಾಶಯಕ್ಕೆ ಬಂದಿರುವ ಸ್ವಲ್ಪ ನೀರಿನಲ್ಲಿ ಈ ಭಾಗದ ನವಲಗುಂದ-ರೋಣದ ಭಾಗದ ಎಂ.ಆರ್.ಬಿ.ಸಿ ಮತ್ತು ನರಗುಂದ ಎನ್.ಬಿ.ಸಿ ಕಾಲುಗಳಿಗೆ ಆ.11ರಿಂದ30ವರೆ ನೀರು ಹರಿಸಿದೆ. ಅದೇ ರೀತಿ ರಾಮದುರ್ಗ, ಬದಾಮಿ ತಾಲೂಕುಗಳಗೆ ಹೊಂದಿರುವ ಎಂ.ಎಲ್.ಬಿ.ಸಿ ಕಾಲುವೆಗೆ ಆ.18ರಿಂದ30ವರಗೆ ಜಲಾಶಯದಿಂದ ಒಟ್ಟು 3 ಟಿಎಂಸಿ ನೀರು ಪೂರೈಕೆ ಮಾಡಿದರೂ ಸಹ ಕೆಳ ಭಾಗದ ಯಾವ ಗ್ರಾಮಗಳ ಕೆರೆಗಳಿಗೂ ನೀರು ಮುಟ್ಟಿಲ್ಲ. ಈ 3 ಟಿಎಂಸಿ ನೀರನ್ನು ಮೇಲ್ಭಾಗದ ರೈತರು ಕಾಲುವೆ ಮತ್ತು ಪಂಪ್‌ಸೆಟ್‌ಗಳ ಮೂಲಕ ಎತ್ತಿ ಜಮೀನಿಗೆ ಹಾಯಿಸಿದ್ದರಿಂದ ಕೆರೆಗಳಿಗೆ ನೀರು ಇಲ್ಲವಾಗಿದೆ.
ಕುಡಿಯುವ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ ಜಲಾಶಯದಿಂದ ಕಾಲುವೆಗಳಗೆ ನೀರು ಬಿಡಲಾಗಿತ್ತು, ಆದರೆ ಮೇಲ್ಭಾಗದಲ್ಲಿ ನೀರು ಸೊರಿಕೆ ಆಗಿದ್ದರಿಂದ ಕೆಳ ಭಾಗದ ಕಾಲುಗಳಿಗೆ ನೀರು ಮುಟ್ಟಿಲ್ಲವೆಂದು ನವೀಲುತೀರ್ಥದ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳ ಅಧ್ಯಕ್ಷ ಸದುಗೌಡ ಪಾಟೀಲ ಹೇಳಿದರು.ನರಗುಂದ-ಭೈರನಹಟ್ಟಿ-ಕೊಣ್ಣೂರ ಭಾಗದ ಕಾಲುವೆಗಳಿಗೆ ಜಲಾಶಯದ ನೀರು ಮುಟ್ಟದೆ ಜನ ಜಾನುವಾರುಗಳಿಗೆ ತೊಂದರೆಯಾಗಿದೆ. ಈ ಭಾಗದ ಕಾಲುವೆಗಳಿಗೆ ನೀರು ಪೂರೈಕೆ ಮಾಡಬೇಕೆಂದು ರೈತರು ಮನವಿ ನೀಡಿದ್ದಾರೆ ಎನ್ನುತ್ತಾರೆ ನೀರಾವರಿ ನಿಗಮದ ಅಧಿಕಾರಿ ಮಹೇಶ ಓಲೇಕಾರ.ನರಗುಂದ ಭಾಗದ ಕಾಲುವೆಗಳಿಗೆ ನೀರು ಬರದಿದ್ದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರವಾಗಿದೆ. ಜಿಲ್ಲಾಧಿಕಾರಿ ನಮ್ಮ ಕಾಲುವೆಗಳಿಗೆ ಜಲಾಶಯದಿಂದ ನೀರು ಪೂರೈಕೆಗೆ ಮುಂದಾಗಬೇಕು ಎಂದು ಆಗ್ರಹಿಸುತ್ತಾರೆ ರೈತ ಸಂಘ ಹಾಗೂ ಹಸಿರು ಸೇನೆಯ ಶಹರ ಘಟಕದ ಅಧ್ಯಕ್ಷ ವಿಠಲ ಜಾಧವ.