ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿರುವ ಪ್ರಕರಣ ಖಂಡಿಸಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟಗಳ ಕಾರ್ಯಕರ್ತರು ಕರೆ ನೀಡಿದ್ದ ಮಳವಳ್ಳಿ ಬಂದ್ ಯಶಸ್ವಿಯಾಯಿತು.ಬಂದ್ ಹಿನ್ನೆಲೆಯಲ್ಲಿ ಗುರುವಾರ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ನೀಡಿದರು. ಸರ್ಕಾರಿ ಕಚೇರಿಗಳು, ಆಸ್ಪತ್ರೆ, ಮೆಡಿಕಲ್‌ಗಳು, ಶಾಲೆಗಳು, ಸಾರಿಗೆ ಬಸ್ ಸೇರಿ ಖಾಸಗಿ ವಾಹನಗಳ ಸಂಚಾರ ಹೊರತು ಪಡಿಸಿ ಬಹುತೇಕ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು.
ಮಾನವ ಸರಪಳಿ, ಪ್ರತಿಭಟನೆ:ಬಿಜೆಪಿ-ಜೆಡಿಎಸ್ ಹಾಗೂ ಹಿಂದೂಪರ ಸಂಘಟಗಳ ಕಾರ್ಯಕರ್ತರು ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ ಪ್ರತಿಭಟನಾ ಮೆರವಣಿ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅನಂತ್‌ರಾಂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ನಡೆಸಿದರು.
ಈ ವೇಳೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಂದು ಧರ್ಮವನ್ನು ಒಲೈಸಿಕೊಂಡು ಮತ್ತೊಂದು ಧರ್ಮವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಎಲ್ಲಾ ಧರ್ಮವನ್ನು ಸಮಾನಾಗಿ ಕಾಣಬೇಕು. ರಾಜಕೀಯ ಮತ ಬ್ಯಾಂಕ್‌ಗಾಗಿ ನೀಚತನ ಬಿಡಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲಾ ಧರ್ಮದವರು ಮತ ಹಾಕಿದ್ದಾರೆ ಎನ್ನುವುದನ್ನು ಅರಿತು ಸರ್ವಜನ ಶಾಂತಿಯ ತೋಟದ ಜನರನ್ನು ರಕ್ಷಣೆ ಮಾಡಬೇಕು. ಹಿಂದು ಸಮುದಾಯ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆ ಕೊಡದಂತೆ ಗೌರವಯುತವಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಂ ಸಮುದಾಯ ಹಿಂದು ಧರ್ಮದ ಜನತೆಯನ್ನು ಏಕೆ ದ್ವೇಷದಿಂದ ಕಾಣುತ್ತೀರಿ. ಹಿಂದುಗಳು ಮುಸ್ಲಿಂ ಸಮುದಾಯಕ್ಕೆ ಏನು ಅನ್ಯಾಯ ಮಾಡಿದ್ದಾರೆ. ನಾವು ಟಿಪ್ಪುಸುಲ್ತಾನ್ ಆಳ್ವಿಕೆಯನ್ನು ಗೌರವಿಸುತ್ತೇವೆ. ದೇವಸ್ಥಾನ ಮಸೀದಿಗಳನ್ನು ಕಟ್ಟಿಸಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ, ಮದ್ದೂರಿನಲ್ಲಿ ನಡೆದ ಪ್ರಕರಣ ಖಂಡನೀಯ. ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.ಇಲ್ಲಿನ ಶಾಸಕರಿಗೆ ಮದ್ದೂರಿನ ಜನತೆಯ ನೋವು ಕಾಣುತ್ತಿಲ್ಲ. ಜಲಪಾತೋತ್ಸವ ಹೆಸರಿನಲ್ಲಿ ಸಂಗೀತ ನಿರ್ದೇಶಕರನ್ನು ಕರೆಸಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಜಲಪಾತೋತ್ಸವ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಮದ್ದೂರು ಘಟನೆಯಿಂದ ಕಾರ್ಯಕ್ರಮವನ್ನು ಮುಂದೂಡಬೇಕಿತ್ತು ಎಂದರು.
ಕೆಲವರು ಆಸ್ಪತ್ರೆಗೆ ನುಗ್ಗಿ ವೈದ್ಯರಿಗೆ ಹಲ್ಲೆ ಮಾಡುವ ಜೊತೆಗೆ ದಾಂಧಲೆ ನಡೆಸಿದ್ದಾರೆ. ಆರೋಪಿಗಳ ವಿರುದ್ದ ಎಫ್‌ಐಆರ್ ಆಗಿದ್ದರೂ ಕೂಡ ಆರೋಪಿಗಳನ್ನು ಬಂಧಿಸಿಲ್ಲ. ಕೂಡಲೇ ಆಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಬಿಜೆಪಿ ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಆರ್ ಅಶೋಕ್‌ಕುಮಾರ್ ಮಾತನಾಡಿ, ಹಿಂದು ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವುದು ಖಂಡನೀಯ. ಈದ್ ಮೀಲಾದ್ ಮೆರವಣಿಗೆ ಹಾಗೂ ನೃತ್ಯಕ್ಕೆ ಅವಕಾಶ ನೀಡುವ ಪೊಲೀಸ್ ಇಲಾಖೆ ಗಣೇಶ ವಿಜರ್ಸನೆ ಮೆರೆವಣಿಗೆಯಲ್ಲಿ ಕೆಲವೊಂದು ನಿಯಮಗಳನ್ನು ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್ ಕೃಷ್ಣ ಮಾತನಾಡಿ, ಮದ್ದೂರಿನಲ್ಲಿ ಆಶಾಂತಿ ಉಂಟು ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷಗೆ ಒಳಪಡಿಸುವುದರ ಜೊತಗೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ನಂತರ ಮನವಿ ಪತ್ರವನ್ನು ಶಿರಸ್ಥೇದಾರ್ ಗುರುಪ್ರಸಾದ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಯಮದೂರು ಸಿದ್ದರಾಜು, ನಂದಕುಮಾರ್,ದೇವರಾಜು, ಅಶೋಕ್‌ಕುಮಾರ್, ರವಿ, ಜಯರಾಮು, ವಿರೇಶ್‌ಗೌಡ, ಹನುಮಂತು, ಬಸವರಾಜು, ಪ್ರಶಾಂತ್‌ಕುಮಾರ್, ಅಶೋಕ್‌ಕುಮಾರ್, ನಾಗೇಶ್, ಮಧುಗಂಗಾಧರ್, ಕೃಷ್ಣ, ನಂದಕುಮಾರ್, ಕಾಂತರಾಜು ಸೇರಿದಂತೆ ಇತರರು ಇದ್ದರು.