ಐದು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನದ ನಂಬರ್ ಹಂಚಿಕೆಯಾಗಿದ್ದು, ಸ್ವಂತ ಮನೆ ಕಟ್ಟುವ ಬಡವರ ಆಸೆ ಚಿಗುರೊಡೆದಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಪಿ.ಎಂ.ನರೇಂದ್ರಸ್ವಾಮಿ ಅವರ ಭರವಸೆ ಬಡವರಿಗೆ ನೆಮ್ಮದಿ ತರಿಸಿದೆ.

- 896 ಫಲಾನುಭವಿಗಳಿಗೆ ಲಾಟರಿ ಮೂಲಕ ಪಾರದರ್ಶಕ ಆಯ್ಕೆ

- ಸುಮಾರು ೩೩ ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚಿಕೆ

- ಶೀಘ್ರದಲ್ಲೇ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರಿಂದ ಹಕ್ಕುಪತ್ರಸಿ.ಸಿದ್ದರಾಜು, ಮಾದಹಳ್ಳಿ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಐದು ದಶಕಗಳಿಂದ ನಿವೇಶನಕ್ಕಾಗಿ ಕಾಯುತ್ತಿದ್ದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನದ ನಂಬರ್ ಹಂಚಿಕೆಯಾಗಿದ್ದು, ಸ್ವಂತ ಮನೆ ಕಟ್ಟುವ ಬಡವರ ಆಸೆ ಚಿಗುರೊಡೆದಿದೆ.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಸುಮಾರು ೩೩ ಎಕರೆ ಮೈದಾನದಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಿವೇಶನ ರಹಿತ ೮೯೬ ಫಲಾನುಭವಿಗಳಿಗೆ ನಿವೇಶನದ ಸಂಖ್ಯೆಯನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಿದ್ದು, ಸದ್ಯದಲ್ಲಿಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಪಿ.ಎಂ.ನರೇಂದ್ರಸ್ವಾಮಿ ಅವರ ಭರವಸೆ ಬಡವರಿಗೆ ನೆಮ್ಮದಿ ತರಿಸಿದೆ.

1974ರಲ್ಲಿ ಭೂಸ್ವಾಧೀನ:

ಶಾಂತಿ ಕಾಲೇಜು ಮುಂಭಾಗದ ಸುಮಾರು ೩೩ ಎಕರೆ ಪ್ರದೇಶವನ್ನು ಬಡವರಿಗೆ ನಿವೇಶನ ಹಂಚಿಕೆ ಮಾಡಲು ೧೯೭೪ರಲ್ಲಿ ಭೂ-ಸ್ವಾಧೀನಪಡಿಸಿಕೊಳ್ಳಲು ಮುಂದಾಗಿ ೧೯೮೨ರಲ್ಲಿ ಗೆಜೆಟ್ ನೋಟಿಫೇಕೇಶನ್ ಹೊರಡಿಸಲಾಗಿತ್ತು. ೧೯೮೮ರಲ್ಲಿ ೨೦ಕ್ಕೂ ಹೆಚ್ಚು ಭೂ ಮಾಲೀಕರಿಗೆ ೧.೮೯ ಲಕ್ಷ ರು. ಪರಿಹಾರ ಹಣವನ್ನು ಸರ್ಕಾರ ಬಿಡುಗಡೆ ಮಾಡುವುದರ ಜೊತೆಗೆ ಭೂ ಮಾಲೀಕರಿಗೆ ಪ್ರತ್ಯೇಕ ಪರಿಹಾರ ನೀಡಲು ಸೂಚನೆ ಹೊರಡಿಸಲಾಗಿತ್ತು.

ಮೈಸೂರು ರಸ್ತೆಗೆ ಹೊಂದುಕೊಂಡಿರುವ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಹರಾಜು ಹಾಕಲು ಪುರಸಭೆ ಪ್ರಕಟಣೆ ಹೊರಡಿಸಿರುವುದನ್ನು ವಿರೋಧಿಸಿ ಬಡವರಿಗೆ ಮಾತ್ರ ನಿವೇಶನ ನೀಡಬೇಕು. ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಬಾರದೆಂದು ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ನ್ಯಾಯಾಂಗ ಸಮಸ್ಯೆ ಇತ್ಯರ್ಥ:

೧೯೯೪ರಲ್ಲಿ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ದೊಡ್ಡಯ್ಯ ಹಾಗೂ ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಅವರು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಎರಡು ಮೂರು ದಶಕಗಳ ನಂತರ ಅಂದಿನ ಶಾಸಕರಾಗಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರು ಎಲ್ಲಾ ನ್ಯಾಯಾಂಗ ಸಮಸ್ಯೆಗಳನ್ನು ಬಗೆಹರಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಎಲ್ಲಾ ವಾರ್ಡ್‌ಗಳಲ್ಲಿಯೂ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.

ತಡೆಯಾಜ್ಞೆ ತೆರವು:

ಭೂ-ಮಾಲೀಕರು ಮತ್ತೆ ೨೦೧೭ರಲ್ಲಿ ಹೈಕೋರ್ಟ್‌ನಲ್ಲಿ ಭೂ-ಸ್ವಾಧೀನ ಪ್ರಕ್ರಿಯೆಗೆ ತಡೆಯಾಜ್ಞೆ ತಂದರು. 2018ರಲ್ಲಿ ರಾಜಕೀಯ ಬದಲಾವಣೆಯಿಂದಾಗಿ ೨೦೨೩ರ ವರವಿಗೂ ಯಾವುದೇ ನಿವೇಶನ ಹಂಚಿಕೆ ಸಂಬಂಧ ಯಾವುದೇ ಪ್ರಕ್ರೀಯೆ ನಡೆಯಲಿಲ್ಲ. ೨೦೨೩ರಲ್ಲಿ ಮೂರನೇ ಭಾರಿಗೆ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ನ್ಯಾಯಾಲಯಕ್ಕೆ ಬೇಕಾದ ದಾಖಲಾತಿಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ೧೭ಮಂದಿ ಭೂ ಮಾಲೀಕರಿಗೆ ತಲಾ ೩೦*೪೦ ಅಳತೆಯ ನಿವೇಶನ ನೀಡುವುದರ ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿರುವ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ನ್ಯಾಯಾಲಯವು ಅದೇಶ ಹೊರಡಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿತು.

ಫಲಾನುಭವಿಗಳ ಆಯ್ಕೆ:

೨೦೧೭ರಲ್ಲಿ ಆಯ್ಕೆಯಾಗಿದ್ದ ಫಲಾನುಭವಿಗಳನ್ನು ಪುರಸಭೆಯಿಂದ ಪುನರ್‌ ಪರಿಶೀಲಿಸಿ ನಿವೇಶನ ಹೊಂದಿರುವವರು ಹಾಗೂ ನಿಧನ ಹೊಂದಿದವರನ್ನು ತೆಗೆದು ಅಂತಿಮವಾಗಿ ೫೧೫ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಉಳಿದಿರುವ ನಿವೇಶನಕ್ಕೆ ಮತ್ತೆ ಅರ್ಜಿ ಆಹ್ವಾನಿಸಲಾಗಿತ್ತು. ಸಲ್ಲಿಕೆಯಾದ ೧೫೦೦ ಅರ್ಜಿಗಳಲ್ಲಿ ೩೮೧ ಮಂದಿಯನ್ನು ಆಯ್ಕೆ ಮಾಡಲಾಯಿತು.

೩೩ ಎಕರೆ ಪ್ರದೇಶದಲ್ಲಿ ಒಟ್ಟಾರೆ ೮೯೬ ಫಲಾನುಭವಿಗಳನ್ನು ಆಯ್ಕೆಮಾಡಿ ನಿವೇಶನದ ಸಂಖ್ಯೆಯನ್ನು ಲಾಟರಿ ಮೂಲಕ ಕೃಷಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದು, ತಾಲೂಕಿನಲ್ಲಿ ನಾಲ್ಕು ದಶಕದ ಸಮಸ್ಯೆಯನ್ನು ಪಿ.ಎಂ.ನರೇಂದ್ರಸ್ವಾಮಿ ಬಗೆಹರಿಸಿದ್ದು, ನಾಗರೀಕರಲ್ಲಿ ಹೊಸ ಚೈತನ್ಯ ಮೂಡಿಸಿದೆ.ಜಾತಿ ಧರ್ಮ ಎನ್ನದೇ ರಾಜಕೀಯೇತ್ತರವಾಗಿ ೮೯೬ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಪಾರದರ್ಶಕವಾಗಿಯೇ ನಿವೇಶನ ಸಂಖ್ಯೆಯನ್ನು ಲಾಟರಿ ಮೂಲಕ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ರಾಜಕೀಯ ಪ್ರಭಾವ ಎದುರಾದರೂ ಲೆಕ್ಕಿಸದೇ ಬಡವರಿಗೆ ಪ್ರಜಾಪ್ರಭುತ್ವ ದಿನದಂದು ಸಮಾನತೆಯ ಸಂಕೇತವಾಗಿ ನಿವೇಶನ ನೀಡಲಾಗುತ್ತಿದೆ. ಸದ್ಯದಲ್ಲಿಯೇ ಮುಖ್ಯಮಂತ್ರಿಗಳು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ.

- ಪಿ.ಎಂ ನರೇಂದ್ರಸ್ವಾಮಿ ಕೃಷಿ ಸಚಿವರುಕಳೆದ ನಾಲ್ಕು ದಶಕಗಳಿಂದ ತಲೆದೋರಿದ್ದ ನ್ಯಾಯಾಲಯದ ಸಮಸ್ಯೆಗಳನ್ನು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಬಗೆಹರಿಸಿ ನಿವೇಶಕ ಹಂಚಿಕೆ ಮಾಡುತ್ತಿದ್ದಾರೆ. ನಿವೇಶನ ಪಡೆದ ಫಲಾನುಭವಿಗಳು ೨ ವರ್ಷದೊಳಗೆ ಮನೆ ಕಟ್ಟಿಕೊಳ್ಳಬೇಕು. ಸುಮಾರು ೨೦ ವರ್ಷ ಬೇರೆಯವರಿಗೆ ಮಾರುವಂತಿಲ್ಲ. ಸರ್ಕಾರದ ಆದೇಶವನ್ನು ದಿಕ್ಕರಿಸಿದರೇ ನಿವೇಶನವನ್ನು ವಾಪಸ್ ಪಡೆಯಲಾಗುತ್ತದೆ.

- ಡಾ. ಕುಮಾರ, ಜಿಲ್ಲಾಧಿಕಾರಿ, ಮಂಡ್ಯ