ಮಳವಳ್ಳಿ ತಾಲೂಕು ಕಚೇರಿ ಎಫ್‌ಡಿಎ ಅಮಾನತು

| Published : Dec 20 2023, 01:15 AM IST

ಸಾರಾಂಶ

ಸರ್ಕಾರಿ ಜಮೀನು ಖಾಸಗಿಯವರಿಗೆ ಪರಭಾರೆ, ಸ.ನಂ.ನಲ್ಲಿ ೨೩.೦೫ ಎಕರೆ ಇದ್ದರೂ ೨೪ ಎಕರೆಗೆ ಆರ್‌ಟಿಸಿ ಸೃಷ್ಟಿದ ಹಿನ್ನೆಲೆ ಜಿಲ್ಲಾಧಿಕಾರಿ ಡಾ.ಕುಮಾರರಿಂದ ಎಫ್‌ಡಿಎ ಅಮಾನತು ಆದೇಶ

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಯಾವುದೇ ಮಂಜೂರಾಗಿ ಆದೇಶವಿಲ್ಲದಿದ್ದರೂ ಕಾನೂನುಬಾಹೀರವಾಗಿ ಮತ್ತು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಸಂಬಂಧ ಮಳವಳ್ಳಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ.

ಹಾಲಿ ಮಂಡ್ಯ ತಾಲೂಕು ಕಚೇರಿಗೆ ನಿಯೋಜನೆ ಆದೇಶದಲ್ಲಿರುವ ಜಿ.ಎಂ.ಪ್ರಕಾಶ್ ಅವರು ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ಅಮಾನತುಗೊಳಿಸಲಾಗಿದೆ. ಮಳವಳ್ಳಿ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಕಚೇರಿಯ ರಾಜಸ್ವನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಏಕಾಏಕಿ ಖಾಸಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಚೊಟ್ಟನಹಳ್ಳಿ ಗ್ರಾಮದ ಸರ್ವೇ ನಂ. ೧೦೩/ಎ ರ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಅರ್ಜಿ ಸ್ವೀಕೃತವಾಗದಿದ್ದರೂ, ಸಕ್ಷಮ ಪ್ರಾಧಿಕಾರದ ಆದೇಶ, ಅನುಮೋದನೆ ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ತಮ್ಮ ಲಾಗಿನ್‌ನ ಭೂಮಿ ತಂತ್ರಾಂಶದಲ್ಲಿ ಅರ್ಜಿ ದಾಖಲಿಸಿಕೊಂಡು ವಹಿವಾಟು ನಮೂದಿಸಿ, ಅನುಮೋದಿಸಿಕೊಂಡು ಎಂ.ಆರ್.ಅಂಗೀಕರಿಸಿ ೨೫ ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಆರು ಜನ ಖಾಸಗಿ ವ್ಯಕ್ತಿಗಳಿಗೆ ತಲಾ ೪ ಎಕರೆಯಂತೆ ಆರ್‌ಟಿಸಿ ಸೃಜಿಸಿರುವುದಾಗಿ ಉಪ ವಿಭಾಗಾಧಿಕಾರಿಮತ್ತು ಮಳವಳ್ಳಿ ತಹಸೀಲ್ದಾರ್ ವರದಿ ಸಲ್ಲಿಸಿದ್ದಾರೆ.

ಚೊಟ್ಟನಹಳ್ಳಿ ಗ್ರಾಮದ ಸರ್ವೇ ನಂ.೧೦೩/೧ ರ ಜಮೀನಿನ ಆರ್‌ಟಿಸಿ ಕಲಂ ನಂ. ೬೯ರಂತೆ ಒಟ್ಟು ವಿಸ್ತೀರ್ಣ ೨೩.೦೫ ಎಕರೆ ಆಗಿದೆ. ಹೀಗಿರುವಾಗ ರಾಜಸ್ವ ನಿರೀಕ್ಷಕ ಜಿ.ಎಂ.ಪ್ರಕಾಶ್ ಹೊಸದಾಗಿ ಸರ್ವೇ ನಂ.೧೦೩/೧ಎರಂತೆ ಒಟ್ಟು ಆರು ಜನರಿಗೆ ತಲಾ ೪ ಎಕರೆಯಂತೆ ೨೪ ಎಕರೆ ಆರ್‌ಟಿಸಿಯನ್ನು ಸೃಷ್ಟಿಸಿರುವುದು ಕಂಡುಬಂದಿದೆ.