ಸಾರಾಂಶ
ಕಳೆದ ಮೂರು ತಿಂಗಳಿನಿಂದಲೂ ಮಾಲವಿ ಜಲಾಶಯದ ಹತ್ತು ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಮುಂದುವರಿದಿದೆ.
ಹೊಸಪೇಟೆ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮಾಲವಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹಾಕಲಾಗಿದ್ದ ತಡೆಗೋಡೆ ಒಡೆದು ನೀರು ಭಾರೀ ಪ್ರಮಾಣದಲ್ಲಿ ಹರಿದು ಪೋಲಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ಮಾಲವಿ ಜಲಾಶಯದ ಹತ್ತು ಕ್ರಸ್ಟ್ ಗೇಟ್‌ಗಳ ದುರಸ್ತಿ ಕಾರ್ಯ ಮುಂದುವರಿದಿದೆ. ನಾಲ್ಕು ಕೋಟಿ ರು. ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಹಾಗಾಗಿ ಈಗ ಕೇವಲ ನಾಲ್ಕು ಗೇಟ್‌ಗಳ ದುರಸ್ತಿ ಸಾಧ್ಯವಾಗಿದೆ. ಗೇಟ್‌ಗಳ ದುರಸ್ತಿ ಹಿನ್ನೆಲೆಯಲ್ಲಿ ಗೇಟ್ ಬಳಿ ನೀರು ಸಂಗ್ರಹವಾಗದಂತೆ ತಡೆಗೋಡೆ ನಿರ್ಮಿಸಲಾಗಿತ್ತು. ಆದಾಗ್ಯೂ ಕೊಟ್ಟೂರು, ಅಂಬಳಿ ಕಡೆಗಳಿಂದ ಅಪಾರ ಪ್ರಮಾಣದ ಮಳೆ ನೀರು ಹರಿದು ಬಂದಿದೆ. ತಡೆಗೋಡೆ ಸುಸ್ಥಿರವಾಗಿದ್ದರೆ ಕನಿಷ್ಠ ಎರಡು ಅಡಿಗಳಷ್ಟು ನೀರು ಸಂಗ್ರಹವಾಗುತ್ತಿತ್ತು. ನೆಲ್ಕುದ್ರಿ, ಚಿಮ್ಮನಹಳ್ಳಿ, ಉಲುವತ್ತಿ, ಮೋರಿಗೇರಿ ಮತ್ತು ಹರೆಗೊಂಡನಹಳ್ಳಿ ಸೇರಿ ವಿವಿಧ ಗ್ರಾಮಗಳ ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಿತ್ತು. ಆದರೆ, ಇದೀಗ ಸಂಗ್ರಹವಾದ ನೀರು ನೇರವಾಗಿ ತೆರೆದ ಗೇಟ್‌ಗಳ ಮೂಲಕ ಪೋಲಾಗಿ ಹರಿದು ಕಡಲಬಾಳು ಮೂಲಕ ನದಿ ಸೇರುವಂತಾಗಿದೆ.ನಿರ್ಲಕ್ಷ್ಯ:
ಬೆಳಗಿನಿಂದಲೇ ನೀರು ಪೋಲಾಗಿ ಹರಿಯುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆದರೂ ಬೃಹತ್ ನೀರಾವರಿ ಇಲಾಖೆ, ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಜೆಸಿಬಿ ಬಳಸಿ ತಡೆಗೋಡೆ ಭದ್ರಗೊಳಿಸಿ, ನೀರು ಪೋಲಾಗುವುದನ್ನು ತಡೆಗಟ್ಟುವ ಕಾಳಜಿ ತೋರೊಲ್ಲ.ಬೆಳಗಿನ ವೇಳೆಯಲ್ಲಿ ಕಿರು ಪ್ರಮಾಣದಲ್ಲಿದ್ದ ಬಿರುಕು ಇದೀಗ ಒಂದು ಕ್ರಸ್ಟ್ ಗೇಟ್ ಅಷ್ಟಾಗಿದೆ. ಇದೀಗ ಅಪಾರ ಪ್ರಮಾಣದ ನೀರು ಬರೋಬ್ಬರಿ ಐದು ಗೇಟ್‌ಗಳ ಮೂಲಕವೂ ಹರಿದಿದೆ. ಬರೋಬ್ಬರಿ ಕೋಟಿ ರು. ಅನುದಾನವಿದ್ದರೂ ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಈ ವರೆಗೂ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಪೋಲಾಗಿ ನದಿಪಾಲಾಗಿದೆ. ಈ ಹಿಂದಿನ ಶಾಸಕ ಎಸ್. ಭೀಮಾನಾಯ್ಕ ₹165 ಕೋಟಿ ಅನುದಾನಲ್ಲಿ ಜಲಾಶಯಕ್ಕೆ ತುಂಗಭದ್ರಾ ನದಿಯಿಂದ ಶಾಶ್ವತ ನೀರು ಕಲ್ಪಿಸಿದರೂ ಈಗ ನೀರು ಸಂಗ್ರಹಕ್ಕೆ ಕ್ರಮ ವಹಿಸಲಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜಲಾಶಯದಲ್ಲಿ ಎರಡು ಟಿಎಂಸಿಯಷ್ಟು ನೀರು ಸಂಗ್ರಹವಾಗುವ ಜಲಾಶಯ ಈ ಸಾಲಿನಲ್ಲಿ ಬರಿದಾಗುವ ಸಾಧ್ಯತೆ ಇದೆ.