ಸಾರಾಂಶ
ರಂಗೂಪುರ ಶಿವಕುಮಾರ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕೇರಳದ ಲಾಬಿಗೆ ಮಣಿದು ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನುವ ವಿವಾದಗಳ ನಡುವೆಯೂ ಈಗ ಬಂಡೀಪುರದಲ್ಲಿ ಕೇರಳದ ಮಲೆಯಾಳಂ ಸಿನಿಮಾ ಚಿತ್ರೀಕರಣ ನಡೆದಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೆ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಅವಕಾಶವಿದೆ. ಬೇಸಿಗೆ ಕಾಲ ಇನ್ನೂ ಮುಗಿದಿಲ್ಲ, ಇಂಥ ಕಾಲದಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದೂ ನಾನಾ ಅನುಮಾನಗಳಿಗೆ ಕಾರಣವಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅತೀ ಸೂಕ್ಷ್ಮ ಪ್ರದೇಶವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಸಿನಿಮಾ ಚಿತ್ರೀಕರಣ ನಡೆದಿರುವುದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಿನಿಮಾದ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅನುಮತಿ ಪತ್ರ ನೀಡಲು ಅಧಿಕಾರಿಗಳು ಹಿಂದೆ ಮುಂದೆ ನೋಡುತ್ತಿದ್ದಾರೆ ಇದು ಹೊಸ ವಿವಾದಕ್ಕೆ ಕಾರಣವಾಗಿದೆ.
ಯಾವುದೇ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ಸರ್ಕಾರದ ಅನುಮತಿ ಕಡ್ಡಾಯ. ಗೋಪಾಲಸ್ವಾಮಿ ಬೆಟ್ಟದಲ್ಲಿ ನಡೆದಿರುವ ಚಿತ್ರೀಕರಣಕ್ಕೆ ಅನುಮತಿ ಯಾರು ಕೊಟ್ಟರು ಎನ್ನುವ ಪ್ರಶ್ನೆಗೆ ಯಾವ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಮಂಗಳವಾರ ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ತನಕ ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆಯಾ? ಇಲ್ಲವಾ? ಎಂಬುದನ್ನು ಸ್ಪಷ್ಟಪಡಿಸಲು ಅರಣ್ಯ ಇಲಾಖೆ ದ್ವಂದ್ವ ನೀತಿ ಅನುಸರಿಸುತ್ತಿದೆ.ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕ ಎಸ್.ಪ್ರಭಾಕರನ್ ಪ್ರಕಾರ ಮಲೆಯಾಳಂ ಚಿತ್ರೀಕರಣಕ್ಕೆ ಅರಣ್ಯ ಕೇಂದ್ರ ಕಚೇರಿಯಿಂದ ಅನುಮತಿ ನೀಡಿದೆ ನನಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಅವರನ್ನು ಕನ್ನಡಪ್ರಭ ಚಿತ್ರೀಕರಣ ಸಂಬಂಧ ಪ್ರತಿಕ್ರಿಯಿಸಿ ನನಗೂ ಚಿತ್ರೀಕರಣಕ್ಕೆ ಅನುಮತಿ ಕೊಡುವ ಅಧಿಕಾರ ಇಲ್ಲ. ಅರಣ್ಯ ಸಚಿವಾಲಯದಿಂದ ಅನುಮತಿ ಕೊಟ್ಟಿರಬಹುದು ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯ ಸಚಿವಾಲಯದ ಅಧಿಕಾರಿಗಳ ಸಂಪರ್ಕಿಸಿದಾಗಲೂ ಮಾಹಿತಿ ಇಲ್ಲ ಎಂದಿದ್ದಾರೆ. ಆದರೆ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ಯಾರು ಎಂಬುದು ನಿಗೂಢವಾಗಿದೆ. ಆದರೆ ಸ್ಥಳೀಯ ಎಸಿಎಫ್, ಆರ್‌ಎಫ್‌ಒ ಕೇಳಿದರೆ ಸರ್ಕಾರ ಅನುಮತಿ ನೀಡಿದೆ ಎಂದಿದ್ದಾರೆ.
ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರೇ ಒಂದು ವೇಳೆ ಸಿನಿಮಾ ಚಿತ್ರೀಕರಣಕ್ಕೆ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಅನುಮತಿ ನೀಡಿದ್ದರೂ ಅದು ಬೇಸಿಗೆ ಸಮಯದಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೊಟ್ಟಿದ್ದು ಸರಿನಾ ಎಂಬ ಪ್ರಶ್ನೆ ಉದ್ಭವವಾಗಲಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೂಕ್ಷ್ಮ ಪರಿಸರ ವಲಯಲ್ಲಿದೆ. ದೇವಸ್ಥಾನಕ್ಕೆ ಹೋಗಲು ಅರಣ್ಯ ಇಲಾಖೆ ಹಲವು ನಿರ್ಬಂಧ ಹೇರಿದೆ. ಖಾಸಗಿ ವಾಹನಗಳಿಗೆ ಅವಕಾಶವಿಲ್ಲ. ಬೆಳಗ್ಗೆ ೭ ರಿಂದ ಸಂಜೆ 4 ಗಂಟೆ ತನಕ ಮಾತ್ರ ಭಕ್ತರಿಗೆ ಹೋಗಿ ಬರಲು ಅವಕಾಶವಿದೆ. ಆದರೆ ಯಾವುದೇ ಲಾಬಿಗೆ ಮಣಿದು ರಾಜ್ಯ ಸರ್ಕಾರ ಬೇಸಿಗೆ ಕಾಲದಲ್ಲಿ ಅದು ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಸಂಬಂಧ ಪರಿಸರವಾದಿಗಳು ಆಕ್ರೋಶಗೊಂಡ ಸಮಯದಲ್ಲಿ ಅದು ಮಲೆಯಾಳಂ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಸರಿನಾ?:
ರಾಜ್ಯ ಸರ್ಕಾರ ಕೇರಳ ರಾಜ್ಯದ ಮಲೆಯಾಳಂ ಚಿತ್ರಕ್ಕೆ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡಲು ಕಾನೂನಿನಲ್ಲಿ ಅವಕಾಶವಿದೆಯಾ?ಸೂಕ್ಷ್ಮ ಪರಿಸರ ವಲಯದಲ್ಲಿ ಚಿತ್ರೀಕರಣ ಬೇಸಿಗೆ ಕಾಲದಲ್ಲಿ ಬೇಕಾಗಿತ್ತಾ ಎಂಬ ಯೋಚನೆ ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಗೆ ಇರಲಿಲ್ವ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ.ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡುವ ಅಧಿಕಾರ ನನಗಿಲ್ಲ. ಅರಣ್ಯ ಇಲಾಖೆ ಕೇಂದ್ರ ಕಚೇರಿ ಅಥವಾ ಸರ್ಕಾರ ಅನುಮತಿ ನೀಡಿದೆ.-ಎಸ್.ಪ್ರಭಾಕರನ್, ಸಿಎಫ್, ಬಂಡೀಪುರಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ನಾನು ಅನುಮತಿ ನೀಡಿಲ್ಲ. ನನಗೆ ಆ ಅಧಿಕಾರವಿಲ್ಲ. ಅರಣ್ಯ ಇಲಾಖೆ ಸಚಿವಾಲಯ ನೀಡಿರಬಹುದು. ಸಚಿವರನ್ನು ಸಂಪರ್ಕಿಸಿ.
-ಸುಭಾಷ್ ಮಾಲ್ಕಡೆ, ಪಿಸಿಸಿಎಫ್ಕೊನೆಗೂ ಖಚಿತ ಪಡಿಸಿದ ಎಸಿಎಸ್!
ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ ಎಂದು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಂಜುಂಮ್ ಪರ್ವೇಜ್ ಖಚಿತ ಪಡಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು ಅರಣ್ಯ ಇಲಾಖೆಯ ಸಚಿವಾಲಯ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದೆ ಎಂದರು.