ಸಾರಾಂಶ
ಎಚ್.ವಿ.ರವಿಕುಮಾರ್
ಕನ್ನಡಪ್ರಭ ವಾರ್ತೆ ಹೊಳೇನರಸೀಪುರಬಡವರ ಪಾಲಿಗೆ ಕಾಮಧೇನುವಿನಂತೆ ಸೇವೆ ನೀಡಬೇಕಿದ್ದ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯರ ಜತೆಗೆ ಬರುವ ಪುರುಷ ಆರೈಕೆದಾರರಿಗೆ ಅಗತ್ಯ ಕನಿಷ್ಠ ಸೌಲಭ್ಯಗಳು ಇಲ್ಲದೇ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುವಂತಾಗಿದ್ದು, ಮಾನವೀಯತೆ ದೃಷ್ಟಿಯಿಂದ ಒಂದು ವಿಶ್ರಾಂತಿ ಕೊಠಡಿ ಅತ್ಯಗತ್ಯವಾಗಿದೆ.
ಶಾಸಕ ಎಚ್.ಡಿ.ರೇವಣ್ಣನವರ ವಿಶೇಷ ಕಾಳಜಿಯಿಂದ ಪಟ್ಟಣದಲ್ಲಿ ಇರುವ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ೫ ಡಯಾಲಿಸಿಸ್ ಯಂತ್ರಗಳು, ಸಿಟಿ ಸ್ಕ್ಯಾನ್ ಸೌಲಭ್ಯ, ೧೨೦ ಆಕ್ಸಿಜನ್ ಹಾಸಿಗೆಗಳು, ಉನ್ನತ ದರ್ಜೆಯ ಪ್ರಯೋಗಾಲಯ, ತೀವ್ರ ನಿಗಾ ಘಟಕ(ಐಸಿಯು)ಗಳನ್ನು ಪ್ರಾರಂಭಿಸಿ, ಸರ್ಕಾರಿ ಆಸ್ಪತ್ರೆಯ ಬಗ್ಗೆ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದ್ದಾರೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪ್ರತ್ಯೇಕ ಕಟ್ಟಡ ಮತ್ತು ಸುಸಜ್ಜಿತವಾದ ಸಲಕರಣೆ ವ್ಯವಸ್ಥಿತವಾಗಿ ಒದಗಿಸುವ ಜತೆಗೆ ಗರ್ಭಕೋಶ, ಪ್ರಸವ ಮತ್ತು ಸ್ತ್ರೀ ಮತ್ತು ಶಿಶುಗಳ ಚಿಕಿತ್ಸಾ ವಿಭಾಗದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗಳಾಗಿವೆ.ಗ್ರಾಮೀಣ ಪ್ರದೇಶದ ರೈತರ ಹಾಗೂ ಬಡವರ ಹೆಣ್ಣು ಮಕ್ಕಳ ಪಾಲಿಗೆ ತಾಯಿ ಮನೆಗೂ ಮಿಗಿಲಾದ ವಿಶೇಷ ಸ್ಥಾನವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆ ಪಡೆದಿದೆ. ಇಂತಹ ಆಸ್ಪತ್ರೆಯಲ್ಲಿ ಗರ್ಭಿಣಿಯರು, ತಾಯಂದಿರು ಹಾಗೂ ಮಹಿಳೆಯರು ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದಾಗ ಅವರ ಕಾಳಜಿ ವಹಿಸಲು ಆಸ್ಪತ್ರೆಯಲ್ಲಿ ಅನಿವಾರ್ಯವಾಗಿ ಉಳಿಯುವ ಪುರುಷರು ಆಸ್ಪತ್ರೆಯಿಂದ ಹೊರಗೆ ಉಳಿಯಬೇಕು. ಆದ್ದರಿಂದ ಆಸ್ಪತ್ರೆಯಲ್ಲಿ ಪುರುಷರು ರಾತ್ರಿ ತಂಗಲು ಪ್ರತ್ಯೇಕ ಕೊಠಡಿ ಇಲ್ಲದ ಕಾರಣದಿಂದ ಆಸ್ಪತ್ರೆಯ ಹೊರಗಿನ ಆವರಣದಲ್ಲಿ ಮಲಗಬೇಕು. ಹೆರಿಗೆ ಅಥವಾ ಇತರೆ ಕಾರಣಕ್ಕೆ ದಾಖಲಾದ ಮಹಿಳೆಯ ಬಗ್ಗೆ ಭಯ ಹಾಗೂ ಆತಂಕದಲ್ಲಿರುವ ತಂದೆ, ಗಂಡ, ಸಹೋದರ ಅಥವಾ ಆತ್ಮೀಯರು ಬೇಸಿಗೆಯಲ್ಲಿ ವಿಪರೀತ ಸೊಳ್ಳೆಕಾಟದಿಂದ ರಕ್ಷಣೆ ಪಡೆಯಲು ಮೈತುಂಬ ಮುಚ್ಚಿಕೊಳ್ಳಬೇಕು, ಮುಚ್ಚಿಕೊಂಡರೆ ವಿಪರೀತ ಸೆಕೆ ಒಂದೆಡೆಯಾದರೆ, ಮಳೆಗಾಲದಲ್ಲಿ ಮಳೆ ಹಾಗೂ ಚಳಿಯಿಂದ ಮಳೆಯ ನೀರಿನ ಸಿಂಚನ, ಹೀಗಿರುವಾಗ ನಿದ್ದೆ ಹೇಗೆ ಸಾಧ್ಯ. ಆದ್ದರಿಂದ ಆಸ್ಪತ್ರೆಯ ಹೊರಗೆ ಇರುವ ಪುರುಷರ ಹೀನಾಯ ಸ್ಥಿತಿಯನ್ನು ಅರ್ಥೈಸಿಕೊಂಡು ಒಂದು ವಿಶ್ರಾಂತಿ ಕೊಠಡಿ ಕಟ್ಟಿಸಲೇಬೇಕಿದೆ.
-----ಮಹಿಳೆಯರ ಆಸ್ಪತ್ರೆಯಲ್ಲಿ ಪುರುಷ ಆರೈಕೆದಾರರನ್ನು ಆಸ್ಪತ್ರೆಯ ಹೊರಗೆ ಕಳುಹಿಸುವುದು ಮುಂಜಾಗ್ರತೆ ದೃಷ್ಟಿಯಿಂದ ಉತ್ತಮ ಕಾರ್ಯ. ಆದರೆ ರೋಗಿಗಳ ಜತೆಗೆ ಆಸ್ಪತ್ರೆಗೆ ಆಗಮಿಸುವ ಕೇರ್ ಟೇಕರ್‌ಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ತುರ್ತಾಗಿ ಪುರುಷರ ವಿಶ್ರಾಂತಿಗೆ ಕೊಠಡಿ ಕಟ್ಟಿಸಿಕೊಡುವ ಜತೆಗೆ ಆಸ್ಪತ್ರೆಯ ಹಿರಿಮೆಗೆ ಮತ್ತೊಂದು ಗರಿ ತೊಡಿಸುವ ಕಾರ್ಯವಾಗಬೇಕಿದೆ.
ಮನುಗೌಡ ಕಲ್ಲೇನಹಳ್ಳಿ.