ಸಾರಾಂಶ
ಕೊಪ್ಪ ಗಾಯಿತ್ರಿ ಸಾಂಸ್ಕೃತಿಕ ಭವನದಲ್ಲಿ 2023 -24 ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಮಾಜಕ್ಕೆ ದೊಡ್ಡ ಇತಿಹಾಸ ಇದೆ ಎಂದು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರ ಸಮಿತಿ ಗೌರವಾಧ್ಯಕ್ಷ ಜೆ.ಸಿ.ಗೋಪಾಲ ಕೃಷ್ಣ ತಿಳಿಸಿದರು.
ಬುಧವಾರ ಕೊಪ್ಪದ ಗಾಯಿತ್ರಿ ಸಾಂಸ್ಕೃತಿಕ ಭವನದಲ್ಲಿ ನಡೆದ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಕೇಂದ್ರೀಯ ಆಡಳಿತ ಮಂಡಳಿಯ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 25 ವರ್ಷಗಳ ಹಿಂದೆ ನಮ್ಮ ಸಮಾಜದ ಹಿರಿಯರಾದ ಹೆಬ್ಬಿಗೆ ಚಂದ್ರಶೇಖರ ರಾವ್ ಅವರ ಪ್ರಯತ್ನದಿಂದ ಸಮಾಜ ಸಂಘಟನೆಯಾಗಿದೆ. ಅಂದು ಶ್ರಿಂಗೇರಿ ಶ್ರೀಗಳ ಸಲಹೆಯಂತೆ ನಮ್ಮ ಸಮಾಜಕ್ಕೆ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಮಾಜ ಎಂದು ಹೆಸರಿಡಲಾಯಿತು. ಪ್ರಸ್ತುತ 11 ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಸಾಹಿತಿ ಪ್ರೊ. ವೆಂಕಟಸುಬ್ಬಯ್ಯ ಅವರ ಗ್ರಂಥದಲ್ಲೂ ಮಲೆನಾಡ ಹೆಬ್ಬಾರ ಬ್ರಾಹ್ಮಣ ಸಮಾಜವನ್ನು ಉಲ್ಲೇಖಿಸಿದ್ದಾರೆ. ಶಿವಮೊಗ್ಗದಲ್ಲಿ ದಾಖಲೆ ಸಿಕ್ಕಿದೆ. ಕಳಸ, ಶೃಂಗೇರಿ, ಹೊಸನಗರದಲ್ಲೂ ಶಾಸನವಿದೆ. ಹೆಬ್ಬಿಗೆ ಚಂದ್ರಶೇಖರ್ ರಾವ್ ಅವರು ನಮ್ಮ ಸಮಾಜಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಸ್ಮರಿಸಿದರು.ಪ್ರತಿ ವರ್ಷ ನಮ್ಮ ಸಮಾಜದಿಂದ ಶೃಂಗೇರಿ ಶ್ರೀಗಳ ಗುರುದರ್ಶನ ಮಾಡುತ್ತೇವೆ. ಎಲ್ಲಾ 11 ಘಟಕಗಳಲ್ಲಿ ಹಾಗೂ ಕೇಂದ್ರ ಸಮಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ. 2007 ರಿಂದ ಭಗವದ್ಗೀತೆ ಪಠಣ ಪ್ರಾರಂಭಿಸಿದ್ದೇವೆ. ಪ್ರಸ್ತುತ 33 ಸದಸ್ಯರು 18 ಅಧ್ಯಾಯ ಪೂರೈಸಿದ್ದಾರೆ. ಪ್ರತಿ ಘಟಕದಲ್ಲಿ ಉಪಾಕರ್ಮ ಮಾಡುತ್ತಾರೆ. ಧಾರ್ಮಿಕ ಉಪನ್ಯಾಸ, ಕೋಟಿ ಗಾಯಿತ್ರಿ ಜಪ ಮಾಡುತ್ತಿದ್ದೇವೆ. ಸಮಾಜದ ಮುಖವಾಣಿಯಾಗಿ ವಿಪ್ರ ಧ್ವನಿ ನಡೆಸುತ್ತಿದ್ದೇವೆ ಎಂದರು.
ಅತಿಥಿಯಾಗಿದ್ದ ಶಿವಮೊಗ್ಗ ಶ್ರೀ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಚ್.ಎಸ್.ಶಿವಶಂಕರ್ ಮಾತನಾಡಿ, ನಮ್ಮ ಸಂಘಟನೆ ಅಭಿವೃದ್ಧಿ ಹೊಂದಿದೆ. ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ದತ್ತಿ ಕಾಯ್ದೆಯಡಿ ನೋಂದಣಿ ಯಾಗಿದೆ. ಶಾರದಾ ಸೌಹಾರ್ದ ಸಹಕಾರ ಸಂಘದ ಅಡಕೆ ಮಂಡಿಗೆ ಸದಸ್ಯರು ಉತ್ತಮ ಗುಣಮಟ್ಟದ ಅಡಕೆ ಹಾಕಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮುಂದಿನ 3 ವರ್ಷದ ಅವಧಿಯ ಆಡಳಿತ ಮಂಡಳಿ ಸದಸ್ಯರ ಹೆಸರನ್ನು ಘೋಷಣೆ ಮಾಡಿದರು.ಸಭೆ ಅಧ್ಯಕ್ಷತೆಯನ್ನು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೆ.ವಿ.ವಿಜಯರಂಗ ಕೋಟೆತೋಟ ವಹಿಸಿದ್ದರು. ಅತಿಥಿಗಳಾಗಿ ಹೆಬ್ಬಾರ ವಿಪ್ರ ಧ್ವನಿ ಪ್ರಧಾನ ಸಂಪಾದಕ ಕೀಳಂಬಿ ರಾಜೇಶ್, ಮಹಾ ಸಭಾದ ಖಜಾಂಚಿ ಕೆಸುವೆ ಪ್ರವೀಣ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಚರಣ ಹೆಬ್ಬಾರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೊಪ್ಪದ ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ವಿ.ಗೋಪಾಲಕೃಷ್ಣ ಅವರನ್ನು ಸನ್ಮಾನ ಮಾಡಲಾಯಿತು. ವಿಶೇಷ ಸೇವಾ ಪುರಸ್ಕಾರವನ್ನು ಶೃಂಗೇರಿ ಜಗದ್ಗುರು ಸನ್ನಿಧಿಯಲ್ಲಿ ವಿಶೇಷ ಸೇವಾ ನಿರತರಾದ ಸಬ್ಬಳ್ಳಿ ವೇ.ಬ್ರ.ನಾಗೇದ್ರಭಟ್ಟರಿಗೆ ನೀಡಿ ಗೌರವಿಸಲಾಯಿತು. ಸಾಧಕರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಗಂಗನಕೊಡಿಗೆ ಮಂಜಪ್ಪಯ್ಯ, ರಾಜ್ಯ ಸಹಕಾರಿ ರತ್ನ ಪ್ರಶಸ್ತಿ ಪಡೆದ ಮೊದಲಮನೆ ವಿಶ್ವನಾಥ, ಕೆಳಕೊಡಿಗೆ ಕೃಷಿ ಸಾಧಕ ಸತ್ಯಪ್ರಕಾಶ್, ಅಂತಾರಾಷ್ಟೀಯ ಯೋಗ ಪ್ರಶಸ್ತಿ ಪುರಸ್ಕೃತ ಕು. ಸಿಂಧುಸಿರಿ ಹೆಬ್ಬಾರ್ ಅವರಿಗೆ ನೀಡಿ ಗೌರವಿಸಲಾಯಿತು. ಯಶಸ್ವಿನಿ ಸಾಹಿತ್ಯ ಕಲಾ ಪ್ರಶಸ್ತಿಯನ್ನು ಲೇಖಕಿ ಮಕ್ಕಿಮನೆ ಗೀತಾ, ಬೆಂಗಳೂರಿನ ಭರತ ನಾಟ್ಯ ಕಲಾವಿದೆ ಕು.ಮಹಿತಾ ಹೆಬ್ಬಾರ್ ಅವರಿಗೆ ನೀಡಿ ಗೌರವಿಸಲಾಯಿತು. ಭಗವದ್ಗೀತೆಯಲ್ಲಿ 18 ಅಧ್ಯಾಯ ಪೂರೈಸಿ ಶೃಂಗೇರಿ ಗುರುಗಳ ಸಾನ್ನಿಧ್ಯದಲ್ಲಿ ವಾಚನ ಮಾಡಿದ ವಿಜಯಲಕ್ಷ್ಮಿ, ಅರ್ಚನ, ರೇಣುಕ ಅವರನ್ನು ಗೌರವಿಸಲಾಯಿತು.ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಹೈಯರ್ ಎಜುಕೇಶನ್ ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಲಾಯಿತು. ಕೇಂದ್ರ ಸಮಿತಿ ಖಜಾಂಚಿ ಪ್ರವೀಶ್ ಜಮಾ-ಖರ್ಚು ಮಂಡಿಸಿದರು. ವೈ.ಎಸ್.ರಾಮಚಂದ್ರ ಸ್ವಾಗತಿಸಿದರು. ಚಂದ್ರಮೋಹನ್ ಹಾಗೂ ನಟೇಶ್ ಕಾರ್ಯಕ್ರಮ ನಿರೂಪಿಸಿದರು.