ಸಾರಾಂಶ
ಭತ್ತದ ಗದ್ದೆಯಲ್ಲಿ ಮಂಗಳವಾರ ಮುಂಜಾನೆ ಭೂತಾಯಿಗೆ ಪೂಜೆ ಸಲ್ಲಿಸಿ ಭೂತಾಯಿಗೆ ಬಸರಿ ಬಯಕೆ ತೀರಿಸುವ ದಿನವಾಗಿ ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಯನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ.
ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ಭತ್ತದ ಗದ್ದೆಯಲ್ಲಿ ಮಂಗಳವಾರ ಮುಂಜಾನೆ ಭೂತಾಯಿಗೆ ಪೂಜೆ ಸಲ್ಲಿಸಿ ಭೂತಾಯಿಗೆ ಬಸರಿ ಬಯಕೆ ತೀರಿಸುವ ದಿನವಾಗಿ ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆಯನ್ನು ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ. ಹಸಿರು ಹೊದ್ದ ಹೊಲ-ಗದ್ದೆಗಳಿಗೆ ಆನ್ನದಾತರು ತೆರಳಿ ವೈವಿದ್ಯಮಯ ಖಾದ್ಯಗಳನ್ನು ರಾತ್ರಿಯಲ್ಲಿ ನಿದ್ರೆ ಬಿಟ್ಟು ಸಿದ್ದಪಡಿಸಿಕೊಂಡು ಬೆಳಿಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಗದ್ದೆಗೆ ಭೂಮಣಿ ಬುಟ್ಟಿಯಲ್ಲಿ ಮಡಿಯಿಂದ ಸಿದ್ದಪಡಿಸಲಾದ ಆಹಾರ ಪದಾರ್ಥವನ್ನು ತುಂಬಿಕೊಂಡು ಮನೆಯ ಯಜಮಾನ ಬುಟ್ಟಿ ಹೊತ್ತ ಮುಂದೆ ಸಾಗಿದರೆ ಮುತ್ತೈದೆ ಹೆಣ್ಣು ಮಕ್ಕಳು ಕಳಸದ ದೀಪಹಿಡಿದು ಕೊಂಡು ಜೊತೆಯಲ್ಲಿ ಪೂಜಾ ಸಾಮಗ್ರಿಯೊಂದಿಗೆ ಗಂಟೆ ಜಾಗಟೆಯ ಸದ್ದು ಮಾಡಿಕೊಂಡು ತೆರಳುವುದು ಸಂಪ್ರದಾಯವಾಗಿದೆ.ಭೂಮಿ ಹುಣ್ಣಿಮೆಯ ಹಿಂದಿನ ದಿನ ರೈತ ತನ್ನ ಜಮೀನಲ್ಲಿ ತಳಿರು ತೋರಣ ಬಾಳೆ ಕಬ್ಬಿನ ಸುಳಿಯನ್ನು ಕಟ್ಟಿ ಭತ್ತ ಅಡಿಕೆಗಿಡದ ಬಳಿ ಶೃಂಗರಿಸಿದ ಜಾಗಕ್ಕೆ ಮುಂಜಾನೆ ತೆರಳಿ ಬಿಳಿ ಹಸಿರು ಕೆಂಪು ಬಣ್ಣದ ರವಿಕೆಯನ್ನು ಹಾಕಿ ಆಭರಣವನ್ನು ತೊಡಿಸಿ ಸಗಣಿಯ ಗಣಪತಿಯನ್ನು ಇಟ್ಟು ಕಳಸವನ್ನು ಪೂಜಿಸಿ ಭೂತಾಯಿಗೆ ಸಮರ್ಪಿಸಿ ಸಮೃದ್ಧಿಯ ಫಸಲು ಕೊಡುವಂತೆ ಪ್ರಾರ್ಥಿಸುವುದರೊಂದಿಗೆ ಬೆರಕೆ ಸೊಪ್ಪು ಮತ್ತು ವಿವಿಧ ಭಕ್ಷ ಭೋಜನವನ್ನು ಎಡೆ ಮಾಡಿ ನಂತರ ಕುಟುಂಬದವರು ಮತ್ತು ಇತರರು ಸೇರಿ ತೋಟ ಗದ್ದೆಯಲ್ಲಿ ಸಾಮೂಹಿಕವಾಗಿ ಊಟಮಾಡಿಕೊಂಡು ಬರುವುದು ಈ ಹಿಂದಿನಿಂದಲೂ ನಡೆಸಿಕೊಂಡು ಬಂದ ಪದ್ದತಿಯಾಗಿದೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಮ್ಮ ಹಿಂದಿನವರು ನಡೆಸಿಕೊಂಡ ಬಂದ ಪದ್ದತಿಯ ಕುರಿತು ಸವಿಸ್ತಾರವಾಗಿ ವಿವರಿಸಿದರು.