ಹಾಸನದ ಕೃಷಿ ಕಾಲೇಜು ಸ್ಥಳಾಂತರದ ಹಿಂದೆ ಸರ್ಕಾರದ ದುರುದ್ದೇಶವಿದೆ

| Published : Mar 25 2025, 12:47 AM IST

ಹಾಸನದ ಕೃಷಿ ಕಾಲೇಜು ಸ್ಥಳಾಂತರದ ಹಿಂದೆ ಸರ್ಕಾರದ ದುರುದ್ದೇಶವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಕಾಲೇಜನ್ನು ಮಂಡ್ಯಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶವಿದ್ದು, ಕಾಲೇಜನ್ನು ಇಲ್ಲೆ ಉಳಿಸದಿದ್ದರೇ ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು. ಕಾಲೇಜಿನ ಅಭಿವೃದ್ಧಿಗಾಗಿ ಹೊಸ ಕೋರ್ಸ್‌ಗಳನ್ನು ಪ್ರಯತ್ನದಲ್ಲಿ ತೊಡಗಿದ್ದೇವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕೋರ್ಸ್‌ಗಳನ್ನು ತರಲು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ರೀತಿ ರೈತರ ಹಿತವನ್ನು ಕಡೆಗಣಿಸುತ್ತಿದೆ. ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಇಲ್ಲಿನ ಕೃಷಿ ಕಾಲೇಜನ್ನು ಮಂಡ್ಯಕ್ಕೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶವಿದ್ದು, ಕಾಲೇಜನ್ನು ಇಲ್ಲೆ ಉಳಿಸದಿದ್ದರೇ ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ಹಾಸನದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೃಷಿ ಕಾಲೇಜನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸ್ಥಳಾಂತರಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ವಿರುದ್ಧ ಸಿಡಿಮಿಡಿಗೊಂಡರು. ಸರ್ಕಾರದ ಈ ನಡೆಯನ್ನು ದುರುದ್ದೇಶಪೂರಿತ ಎಂದು ಟೀಕಿಸಿ, ರೈತರು ಮತ್ತು ಬಿಜೆಪಿ ಶಾಸಕರೊಂದಿಗೆ ಸೇರಿ ಬೃಹತ್ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಹಾಸನದ ಕೃಷಿ ಕಾಲೇಜಿನಲ್ಲಿ ಸುಮಾರು ೪೦೦ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದು ಜಿಕೆವಿಕೆಯ (ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು) ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸರ್ಕಾರ ರಾತ್ರೋರಾತ್ರಿ ಇದನ್ನು ಮಂಡ್ಯಕ್ಕೆ ಸೇರಿಸಿ ಬಿಲ್ ಪಾಸ್ ಮಾಡಿದೆ. ಈ ಪ್ರಸ್ತಾವನೆಯನ್ನು ಸದನದಲ್ಲಿ ಚರ್ಚಿಸಿ, ಪರಿಶೀಲನೆಯಲ್ಲಿದೆ ಎಂದು ಹೇಳಿದ್ದರು. ಆದರೆ ರಹಸ್ಯವಾಗಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗಿದೆ ಎಂದು ರೇವಣ್ಣ ಆರೋಪಿಸಿದರು. ಗವರ್ನರ್ ಈ ಬಿಲ್‌ಗೆ ಅಂಗೀಕಾರ ನೀಡಬಾರದೆಂದು ನಾವು ಮನವಿ ಮಾಡಿದ್ದೇವೆ. ಕೃಷಿ ಕಾಲೇಜು ಹಾಸನದಲ್ಲೇ ಉಳಿಯಬೇಕು ಎಂದು ಅವರು ಒತ್ತಾಯಿಸಿದರು.

ಕಾಲೇಜಿನ ಅಭಿವೃದ್ಧಿಗಾಗಿ ಹೊಸ ಕೋರ್ಸ್‌ಗಳನ್ನು ಪ್ರಯತ್ನದಲ್ಲಿ ತೊಡಗಿದ್ದೇವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೊಸ ಕೋರ್ಸ್‌ಗಳನ್ನು ತರಲು ಮನವಿ ಮಾಡಿದ್ದಾರೆ. ಆದರೆ, ಸರ್ಕಾರ ಈ ರೀತಿ ರೈತರ ಹಿತವನ್ನು ಕಡೆಗಣಿಸುತ್ತಿದೆ. ರೈತರೆಲ್ಲರೂ ಒಗ್ಗೂಡಿ ಹೋರಾಟ ಮಾಡುತ್ತೇವೆ. ಬಿಜೆಪಿ ಶಾಸಕರು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೋರಾಟ ನಡೆಸುತ್ತೇವೆ ಎಂದರು.

ಹಾಸನ ಹಾಲು ಒಕ್ಕೂಟಕ್ಕೆ ದಿನಕ್ಕೆ ೧೪ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ೨.೫ ಲಕ್ಷ ಲೀಟರ್ ಹಾಲನ್ನು ನಾವೇ ಮಾರಾಟ ಮಾಡುತ್ತೇವೆ. ಉಳಿದ 11.5 ಲಕ್ಷ ಲೀಟರ್‌ ಹಾಲನ್ನು ಪರಿವರ್ತನೆಗೆ ಕಳುಹಿಸುತ್ತೇವೆ. ಇದರಿಂದ ಒಂದು ಲೀಟರ್ ಹಾಲನ್ನು ಪರಿವರ್ತನೆಗೆ ಕಳುಹಿಸಿದಾಗ ಸುಮಾರು ೨.೫ರಿಂದ ೩ ರುಪಾಯಿ ನಷ್ಟ ಉಂಟಾಗುತ್ತಿದೆ. ಹಾಲಿನ ದರ ಏರಿಕೆ ಮತ್ತು ರೈತರಿಗೆ ಸೂಕ್ತ ಬೆಲೆ ಒದಗಿಸುವ ವಿಷಯದಲ್ಲಿ ರಾಜ್ಯ ಸರ್ಕಾರದ ತೀರ್ಮಾನ ಎದುರು ನೋಡುತ್ತಿರುವುದಾಗಿ ಹೇಳಿದರು. ಎಲ್ಲ ವಿಷಯಗಳನ್ನು ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇನೆ. ರೈತರಿಗೆ ಎಷ್ಟು ದರ ನೀಡಬೇಕು ಎಂಬುದು ಸರ್ಕಾರಕ್ಕೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಏನು ನಿರ್ದೇಶನ ಕೊಡುತ್ತಾರೆ ಎಂಬುದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಚಿವ ಕೆ.ಎನ್. ರಾಜಣ್ಣ ಅವರಿಗೆ ಸಂಬಂಧಿಸಿದ ಹನಿಟ್ರ್ಯಾಪ್ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ರೇವಣ್ಣ ನಿರಾಕರಿಸಿ, ಈ ಬಗ್ಗೆ ಇವತ್ತು ಏನೂ ಮಾತನಾಡುವುದಿಲ್ಲ. ಸತೀಶ್ ಜಾರಕಿಹೊಳಿ ಏನು ಹೇಳಿದ್ದಾರೆ ಎಂಬುದನ್ನೂ ಚರ್ಚಿಸುವುದಿಲ್ಲ. ಸಮಯ ಬಂದಾಗ ಸವಿಸ್ತಾರವಾಗಿ ಎಲ್ಲವನ್ನೂ ಬಿಚ್ಚಿಡುತ್ತೇನೆ " ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

======

* ಬಾಕ್ಸ್‌::: ಶಾಸಕರ ಅಮಾನತು ಆದೇಶವನ್ನು ರದ್ದುಗೊಳಿಸಬೇಕು

೧೮ ಶಾಸಕರ ಅಮಾನತು ವಿಷಯಕ್ಕೆ ಸಂಬಂಧಿಸಿದಂತೆ, ಸಣ್ಣಪುಟ್ಟ ಘಟನೆಗಳು ಸದನದಲ್ಲಿ ನಡೆಯುತ್ತವೆ. ಅದು ಅಂದಿನ ದಿನಕ್ಕೆ ಮುಗಿಯುತ್ತದೆ. ಸಭಾಧ್ಯಕ್ಷರು ತಕ್ಷಣ ಅಮಾನತು ಆದೇಶವನ್ನು ರದ್ದುಗೊಳಿಸಬೇಕು ಎಂದು ಶಾಸಕ ರೇವಣ್ಣ ಒತ್ತಾಯಿಸಿದರು.