ಸಾರಾಂಶ
ಕೊಟ್ಟೂರು: ಇಲ್ಲಿನ ಪ್ರಸಿದ್ಧ ಶ್ರೀಗುರು ಬಸವೇಶ್ವರ (ಕೊಟ್ಟೂರೇಶ್ವರ) ಸ್ವಾಮಿಯ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಲ್ಲಪ್ಪ ಅಧಿಕಾರ ವಹಿಸಿಕೊಂಡರು.
ಕಳೆದ ನಾಲ್ಕೈದು ತಿಂಗಳ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶಾಂತ ಅವರನ್ನು ಸರ್ಕಾರ ನೇಮಿಸಿತ್ತು. ಆದರೆ, ಇದೀಗ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಗಂಗಾಧರಪ್ಪ ಶಾಂತರನ್ನು ದೂರಿನ ಆಧಾರದ ಮೇರೆಗೆ ಬೇರೆಡೆಗೆ ವರ್ಗಾಯಿಸಬೇಕು ಎಂದು ರಾಜ್ಯದ ಧಾರ್ಮಿಕ ಇಲಾಖೆಯ ಕಮೀಷನರ್‌ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕಮಿಷನರ್ ಶಾಂತರನ್ನು ಯಾದಗಿರಿ ಜಿಲ್ಲೆಗೆ ಸರ್ಕಾರ ಕೂಡಲೇ ವರ್ಗಾವಣೆ ಮಾಡಿತು.ಶಾಂತ ಅವರಿಂದ ತೆರವಾದ ಸ್ಥಾನಕ್ಕೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮಲ್ಲಪ್ಪ ಅವರನ್ನು ಸಹಾಯಕ ಆಯುಕ್ತರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಆದೇಶಿಸಿರುವ ಕಾರಣಕ್ಕಾಗಿ ಮಲ್ಲಪ್ಪ ಶ್ರೀಗುರು ಬಸವೇಶ್ವರ ಸ್ವಾಮೀಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಸ್ವಾಮಿಯ ದೇವಸ್ಥಾನದ ಶಿಖರದ ಕಳಸವನ್ನು ಹೊಸದಾಗಿ ಮಾಡುವ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ಪತ್ರ ರವಾನಿಸಿರುವೆ ಎಂದರು. ದೇವಸ್ಥಾನದ ಬಾಗಿಲಿಗೆ ಬೆಳ್ಳಿಯನ್ನು ಅಳವಡಿಸುವ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನೂ ಮಾಡಲಾಗುತ್ತದೆ ಎಂದರು.ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಉಚ್ಚಂಗೆಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರದಲ್ಲಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಇದೀಗ ಕೊಟ್ಟೂರಿನ ಶ್ರೀಗುರು ಬಸವೇಶ್ವರ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವೆ. ಉಚ್ಚಂಗಿದುರ್ಗದಲ್ಲಿ ಅಭಿವೃದ್ಧಿ ಕಾರ್ಯಗಳು ಜರುಗಿದ್ದು, ಅಲ್ಲಿಯೇ ಹೆಚ್ಚು ಕಾರ್ಯನಿರ್ವಹಿಸುವುದರಿಂದ ವಾರದಲ್ಲಿ ಒಮ್ಮೆ ಮಾತ್ರ ಕೊಟ್ಟೂರಿಗೆ ಆಗಮಿಸಿ ಶ್ರೀಗುರು ಬಸವೇಶ್ವರ ಸ್ವಾಮಿಯ ಕಾರ್ಯನಿರ್ವಹಣೆ ಮಾಡುವೆ ಎಂದರು.
ದೇವಸ್ಥಾನದ ಪ್ರಧಾನ ಧರ್ಮಕರ್ತ ಎಂ.ಕೆ. ಶೇಖರಯ್ಯ ಕಚೇರಿಯ ಸಿಬ್ಬಂದಿ ಕಾರ್ತಿಕ್, ಪ್ರದೀಪ, ಮತ್ತಿತರರು ಇದ್ದರು.