ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಳೆದ ಎರಡು ದಶಕಗಳಿಂದ ಮಲಿನ ನೀರು, ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಆಹಾರವಾಗಿದ್ದ ಚಿತ್ರದುರ್ಗ ಹೊರವಲಯ ಮಲ್ಲಾಪುರ ಕೆರೆಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.ಕೆರೆ ಅಶುಚಿತ್ವ, ನೀರಿನಲ್ಲಿ ತೇಲುವ ತ್ಯಾಜ್ಯ ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಕೆರೆ ನಿರ್ವಹಣೆ ಹೊಣೆ ಹೊತ್ತ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುತ್ತೇನೆ. ಎರಡು ತಿಂಗಳ ಒಳಗಾಗಿ ಕೆರೆ ಅಭಿವೃದ್ಧಿಯಾಗದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.
ಕೆರೆ ಪರಿಶೀಲನೆಗಾಗಿ ಬಂದಿದ್ದೇನೆ ಎಂದು ಅಧಿಕಾರಿಗಳು ಬೇಗ ಸಮಸ್ಯೆ ಪರಿಹರಿಸುವುದಾಗಿ ಬುರುಡೆ ಬಿಡುವುದು ಬೇಡ. ಕೆರೆ ಅಭಿವೃದ್ಧಿಗೆ ಬೇಕಾದಷ್ಟು ಸಮಯ ತಗೆದುಕೊಂಡು, ಸರಿಯಾಗಿ ಕೆಲಸ ನಿರ್ವಹಿಸಿ. ಒಂದು ವೇಳೆ ಕೆಲಸ ಮಾಡದಿದ್ದರೇ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇನೆ. ಕೆರೆ ಸಾರ್ವಜನಿಕರ ಆಸ್ತಿ. ಕೂಡಲೇ ಸ್ವಚ್ಛಗೊಳಿಸಿ ಅದರ ಪೋಟೋ ಹಾಗೂ ವಿಡಿಯೋದೊಂದಿಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಲ್ಲಾಪುರ ಕೆರೆ ಸಂಪರ್ಕಿಸುವ ಹಾಗೂ ಕೆರೆಯಿಂದ ಹೊರಹೋಗುವ ನಾಲಾ ವ್ಯವಸ್ಥೆಯನ್ನು ಸರಿಪಡಿಸಬೇಕು. ಕೆರೆಯ ಸುತ್ತಮುತ್ತಲಿನ ಶಾಲೆಗಳಿಗೆ ನೀರು ನುಗ್ಗಿ ಮಕ್ಕಳಿಗೆ ತೊಂದರೆಯಾಗಿದೆ. ಶಾಲಾ ಪಕ್ಕದಲ್ಲಿರುವ ಚರಂಡಿಯನ್ನು ಸ್ವಚ್ಛಗೊಳಿಸಬೇಕು. ಸೊಳ್ಳೆ ಸೇರಿದಂತೆ ಇತರೆ ಕ್ರಿಮಿಕೀಟಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಕೆರೆಯ ಸುತ್ತಲೂ ಸಾರ್ವಜನಿಕರು ತ್ಯಾಜ್ಯ ಸುರಿಯುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು. ಗ್ರಾಪಂ ಅಧಿಕಾರಿಗಳು ಕೆರೆಯ ಏರಿ ಪಕ್ಕದಲ್ಲಿ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ಸುರಿಯುವರಿಗೆ ದಂಡ ವಿಧಿಸಬೇಕು. ದಂಡಕ್ಕೂ ಮಣಿಯದಿದ್ದರೆ, ಪೊಲೀಸ್ ದೂರು ನೀಡಿ ಎಫ್ಐಆರ್ ದಾಖಲಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ 13 ನೂತನ ಹೈವೆ ನಿರ್ಮಾಣದ ವೇಳೆ ಮಲ್ಲಾಪುರ ಕೆರೆ ಟೂಬಿನಿಂದ ನೀರು ಹೊರಬಿಡಲು ಕಲ್ಪಿಸಿದ್ದ ನಾಲಾ ವ್ಯವಸ್ಥೆ ಮುಚ್ಚಿ ಹೋಗಿದೆ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡಿ, ಮೊದಲಿನ ಹಾಗೆ ಕೆರೆ ಟೂಬಿನಿಂದ ನೀರು ಹೊರಬಿಡಲು ನಾಲಾ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಿಗೆ ವಿವರಿಸಿದರು.*ಕವಾಡಿಗರಹಟ್ಟಿಗೆ ಭೇಟಿ: ವರ್ಷದ ಹಿಂದೆ ಕಲುಷಿತ ನೀರು ಸೇವಿಸಿ ಅಹಿತಕರ ಘಟನೆ ಸಂಭವಿಸಿದ್ದ ಚಿತ್ರದುರ್ಗ ನಗರದ ಕವಾಡಿಗರಹಟ್ಟಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ನಿವಾಸಿಗಳ ಸಮಸ್ಯೆ ಆಲಿಸಿದರು.
ಕವಾಡಿಗರಹಟ್ಟಿಯಲ್ಲಿ ಜರುಗಿದ ಅಹಿತಕರ ಘಟನೆ ಬಳಿಕ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹಾಗೂ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಓವರ್ ಹೆಡ್ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಪ್ರತಿ ಮನೆಗೂ ಹೊಸದಾಗಿ ನಳ ಸಂಪರ್ಕ ಕಲ್ಪಿಸಲಾಗಿದೆ. ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ಕುಡಿಯುವ ನೀರಿನ ಯಾವುದೇ ತೊಂದರೆ ಇಲ್ಲ ಎಂದು ಕವಾಡಿಗರಹಟ್ಟಿ ನಿವಾಸಿಗಳು ಉಪಲೋಕಾಯುಕ್ತರಿಗೆ ಮಾಹಿತಿ ನೀಡಿದರು.ಈ ಹಿಂದೆ ಕಲುಷಿತ ನೀರು ಕುಡಿದು ದುರಂತ ಸಂಭವಿಸಿದ್ದ ಕವಾಡಿಗರಹಟ್ಟಿಯಲ್ಲಿನ ನಿವಾಸಿಗಳಿಗೆ ರಸ್ತೆ, ಮನೆಗಳಿಗೆ ಶೌಚಾಲಯ, ನಿವೇಶನ, ಸೂರು ವಿತರಣೆ ಕುರಿತಂತೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹೇಳಿದರು.
ಸ್ವಯಂ ಪ್ರೇರಿತ ಪ್ರಕರಣದಲ್ಲಿ ನಗರಸಭೆ ಪೌರಾಯುಕ್ತರು, ಜಿಲ್ಲಾಧಿಕಾರಿಗಳನ್ನು ಪಾರ್ಟಿಗಳನ್ನಾಗಿ ಮಾಡಿಕೊಳ್ಳಲಾಗುವುದು. ಕವಾಡಿಗರಹಟ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಕಾಲಕಾಲಕ್ಕೆ ವರದಿ ನೀಡಬೇಕು. ಕವಾಡಿಗರಹಟ್ಟಿ ಬಡಾವಣೆ ನಿವಾಸಿಗಳಿಗೆ ಅನುಕೂಲ ಕಲ್ಪಿಸಿಕೊಡವವರೆಗೂ ಪ್ರಕರಣ ಚಾಲ್ತಿಯಲ್ಲಿ ಇರಲಿದೆ ಎಂದು ಉಪಲೋಕಾಯುಕ್ತರು ಹೇಳಿದರು.ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ, ಎಎಸ್‌ಪಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ತಹಸೀಲ್ದಾರ್ ಡಾ.ನಾಗವೇಣಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.