ಸಂಸ್ಕೃತದಿಂದ ಕನ್ನಡ ಸಾಹಿತ್ಯ ಕ್ಷೇತ್ರ ಸಮೃದ್ಧ:ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್

| Published : May 28 2024, 01:06 AM IST

ಸಂಸ್ಕೃತದಿಂದ ಕನ್ನಡ ಸಾಹಿತ್ಯ ಕ್ಷೇತ್ರ ಸಮೃದ್ಧ:ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲರ ಸಮಗ್ರ ಶ್ರಮದಿಂದ ಸಂಸ್ಕೃತ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಕಾವ್ಯ ಪರಂಪರೆಯ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಆಧುನಿಕ ವಿಮರ್ಶಕರು, ಚಿಂತಕರು ಸಹ ಪ್ರಾಚೀನ ಪರಂಪರೆಯತ್ತ ಬರಲು ಸಾಧ್ಯವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಸಂಸ್ಕೃತ ಸಾಹಿತ್ಯವು ಕನ್ನಡಕ್ಕೆ ಬಂದಿದ್ದರಿಂದ ಕನ್ನಡ ಸಾಹಿತ್ಯ ಕ್ಷೇತ್ರ, ಚಿಂತನಾ ಕ್ಷೇತ್ರ, ವಿಮರ್ಶಾ ಕ್ಷೇತ್ರವು ಸಮೃದ್ಧಗೊಂಡಿತು ಎಂದು ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಸಂಸ್ಕೃತ ವಿಭಾಗವು ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಸ್ಕೃತ- ಕನ್ನಡ ಅನುವಾದ ಪರಂಪರೆ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಎಲ್ಲರ ಸಮಗ್ರ ಶ್ರಮದಿಂದ ಸಂಸ್ಕೃತ ಭಾಷೆಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವ ಕಾವ್ಯ ಪರಂಪರೆಯ ಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಆಧುನಿಕ ವಿಮರ್ಶಕರು, ಚಿಂತಕರು ಸಹ ಪ್ರಾಚೀನ ಪರಂಪರೆಯತ್ತ ಬರಲು ಸಾಧ್ಯವಾಯಿತು. ಒಂದು ವೇಳೆ ಸಂಸ್ಕೃತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸದಿದ್ದರೇ ಕನ್ನಡ ಸಾಹಿತ್ಯ ಕ್ಷೇತ್ರವು ಕಲಾಹೀನ ಆಗುತ್ತಿತ್ತು ಎಂದು ಅವರು ಹೇಳಿದರು.

ಹಾಗೆಯೇ, ಕನ್ನಡದ ಹಲವು ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದವಾಗಿವೆ. ಡಾ.ಎಸ್.ಎಲ್. ಭೈರಪ್ಪ ಅವರ ಹಲವು ಕೃತಿಗಳು ಸಂಸ್ಕೃಕ್ಕೆ ಅನುದಾದಿಸಲಾಗಿದೆ. ಆದರೆ, ಸಂಸ್ಕೃತದಿಂದ ಕನ್ನಡಕ್ಕೆ ಅಗಾದ ಪ್ರಮಾಣದಲ್ಲಿ ಕೃತಿಗಳು ಬಂದಿವೆ. ಆದರೆ, ಕನ್ನಡದಿಂದ ಸಂಸ್ಕೃತಕ್ಕೆ ಶೇ.20 ರಷ್ಟು ಕೃತಿಗಳು ಹೋಗಿಲ್ಲ. ಕುವೆಂಪು ಸೇರಿದಂತೆ ಹಲವರ ಕೃತಿಗಳು ಸಂಸ್ಕೃತಕ್ಕೆ ಹೋಗಬೇಕು. ಇದು ಕನ್ನಡವನ್ನು ಸಮೃದ್ಧ, ಶ್ರೀಮಂತಗೊಳಿಸುವ ಕ್ರಮವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕುವೆಂಪು ಭಾಷಾ ಭಾರತಿ ಮತ್ತು ಅನುವಾದ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಪ್ರಧಾನ್ ಗುರುದತ್ ಮಾತನಾಡಿ, ವೇದ, ಉಪನಿಷತ್ ಅಮೂಲ್ಯವಾದ ನಿಧಿಗಳು. ಧಾರ್ಮಿಕ ಸಾಹಿತ್ಯ, ಶುದ್ಧ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯವು ಕನ್ನಡಕ್ಕೆ ಬಂದಿದೆ. ಆಧುನಿಕ ವಿಜ್ಞಾನದಲ್ಲೂ ಕಂಪ್ಯೂಟರ್ ವಿಜ್ಞಾನದಲ್ಲಿ ಸಂಸ್ಕೃತವನ್ನು ವಿಶ್ಲೇಷಣೆಗಾಗಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.

ಕುಂದೂರು ಮಠದ ಶ್ರೀ ಡಾ. ಶರತ್ ಚಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲೆ ಡಾ.ಎಂ. ಪೂರ್ಣಿಮಾ, ಶೈಕ್ಷಣಿಕ ಡೀನ್ ಡಾ. ರೇಚಣ್ಣ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಷಡಕ್ಷರಿ ಇದ್ದರು.

----

ಕೋಟ್...

ಕನ್ನಡ ಸಾಹಿತ್ಯದ ಬೆನ್ನಿನ ಹಿಂದೆ ಸಂಸ್ಕೃತವಿದೆ. ಸಂಸ್ಕೃತದಿಂದ ಕನ್ನಡ ಸಾಹಿತ್ಯ ಕ್ಷೇತ್ರವು ಸಮೃದ್ಧಿಗೊಂಡಿದೆ. ಸಂಸ್ಕೃತ ಸಾಹಿತ್ಯವನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಿದ್ದರಿಂದ, ಮೂಲ ಕೃತಿಗಳನ್ನು ಅಧ್ಯಯನ ಮಾಡಲು ದಾರಿದೀಪ ಆಗಿದೆ.

- ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ವಿಶ್ರಾಂತ ಕುಲಪತಿ

----

ಸಂಸ್ಕೃತ ವಿಶಾಲವಾದ ಮಹಾಸಾಗರ. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಸಂಸ್ಕೃತವೇ ಪ್ರೇರಣೆಯಾಗಿದೆ. ಸಂಸ್ಕೃತ ಭಾಷೆ ಇಲ್ಲದಿದ್ದರೇ ಭರತ ಖಂಡದಲ್ಲಿ ಯಾವುದೇ ಭಾಷೆಯ ಸಾಹಿತ್ಯಕ್ಕೆ ಪ್ರೇರಣೆ ದೊರೆಯುತ್ತಿರಲಿಲ್ಲ. ಜಗತ್ತಿನಲ್ಲಿ ಶತಮಾನಗಳ ಕಾಲ ಭಾಷೆಗಳಿಗೆ ಸಂಸ್ಕೃತ ಪ್ರೇರಕ ಆಗಿದೆ.

- ಪ್ರೊ. ಪ್ರಧಾನ್ ಗುರುದತ್, ಸಾಹಿತಿ