ಶಿರದಿಂದ ಪಾದದವರೆಗೆ ಹಳದಿ ಕೆಂಪು ಬಣ್ಣದ ಉಡುಪು, ಕನ್ನಡ ಬಾವುಟಗಳಿಂದಲೇ ಸಿಂಗಾರಗೊಂಡ ವಾಹನ, ಕೈಯಲ್ಲೊಂದು ಜಾಗೃತಿಯ ಭಿತ್ತಿಪತ್ರ ಇವರನ್ನು ಕಂಡರೆ ರಸ್ತೆಯಲ್ಲಿ ಸಾಕ್ಷಾತ್ ಕನ್ನಡ ಧ್ವಜವೇ ನಡೆದಾಡುತ್ತಿರುವಂತೆ ಭಾಸವಾಗುತ್ತದೆ.
ಶಿವಕುಮಾತ ಕುಷ್ಟಗಿ
ಕನ್ನಡಪ್ರಭ ವಾರ್ತೆ ಗದಗ
ಶಿರದಿಂದ ಪಾದದವರೆಗೆ ಹಳದಿ ಕೆಂಪು ಬಣ್ಣದ ಉಡುಪು, ಕನ್ನಡ ಬಾವುಟಗಳಿಂದಲೇ ಸಿಂಗಾರಗೊಂಡ ವಾಹನ, ಕೈಯಲ್ಲೊಂದು ಜಾಗೃತಿಯ ಭಿತ್ತಿಪತ್ರ ಇವರನ್ನು ಕಂಡರೆ ರಸ್ತೆಯಲ್ಲಿ ಸಾಕ್ಷಾತ್ ಕನ್ನಡ ಧ್ವಜವೇ ನಡೆದಾಡುತ್ತಿರುವಂತೆ ಭಾಸವಾಗುತ್ತದೆ.ಇವರೇ ಗದಗ ತಾಲೂಕಿನ ಕಳಸಾಪೂರ ಗ್ರಾಮದ ಅಪ್ಪಟ ಕನ್ನಡ ಪ್ರೇಮಿ ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ ಗಂಗಪ್ಪ ಖಂಡಮ್ಮನವರ.
4 ದಶಕಗಳಿಂದ ಕನ್ನಡ ನಾಡು, ನುಡಿ ಮತ್ತು ಬಸವತತ್ವ ಪ್ರಸಾರಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಇವರು, ಪ್ರತಿದಿನವೂ ಹಳದಿ ಮತ್ತು ಕೆಂಪು ಬಣ್ಣದ ವಸ್ತ್ರಗಳನ್ನೇ ಧರಿಸಿ ಜನರಲ್ಲಿ ಮಾತೃಭಾಷೆಯ ಅಭಿಮಾನವನ್ನು ಎಚ್ಚರಿಸುತ್ತಿದ್ದಾರೆ.ತಾವು ಸಂಚರಿಸುವ ವಾಹನಕ್ಕೂ ಎಲ್ಲೆಡೆ ಕನ್ನಡ ಬಾವುಟಗಳನ್ನು ಕಟ್ಟಿ, ಜಿಲ್ಲೆಯ ಹಳ್ಳಿ ಪಟ್ಟಣಗಳ ರಸ್ತೆಗಳಲ್ಲಿ ಸಂಚರಿಸುತ್ತಾ ಜನಮನ ಸೆಳೆಯುತ್ತಿದ್ದಾರೆ.
1982ರ ಐತಿಹಾಸಿಕ ಗೋಕಾಕ ವರದಿ ಜಾರಿ ಚಳವಳಿಯ ಸಂದರ್ಭದಲ್ಲಿ, ಮೈಸೂರಿನಲ್ಲಿ ತಮ್ಮ ಬೆನ್ನ ಮೇಲೆ 25 ಕೆಜಿ ತೂಕದ ಕಲ್ಲನ್ನು ಹೊತ್ತುಕೊಂಡು ಪ್ರತಿಭಟನೆ ನಡೆಸುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು. ಅಂದು ಪೊಲೀಸ್ ವಶದಲ್ಲಿದ್ದ ಇವರನ್ನು ವರನಟ ಡಾ. ರಾಜ್ಕುಮಾರ್ ಅವರೇ ಖುದ್ದಾಗಿ ಠಾಣೆಗೆ ತೆರಳಿ ಬಿಡುಗಡೆಗೊಳಿಸಿ ಬೆಂಬಲಿಸಿದ್ದರು.ಆ ಘಟನೆಯಿಂದ ಪ್ರೇರಿತರಾದ ಇವರು, ಅಂದಿನಿಂದ ಇಂದಿನವರೆಗೂ ಯುವ ಜನತೆಯಲ್ಲಿ ಕನ್ನಡ ಪ್ರೇಮ, ರಾಷ್ಟ್ರಭಕ್ತಿ ಮತ್ತು ಮಹಾನ್ ನಾಯಕರ ಆದರ್ಶಗಳನ್ನು ಬಿತ್ತಲು ಏಕಾಂಗಿಯಾಗಿ ಸಂಚರಿಸುತ್ತಿದ್ದಾರೆ.
1995ರಿಂದ ಕಳಸಾಪೂರ ಬಸವ ಕೇಂದ್ರದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಂದೇಶವನ್ನು ಕೂಡಾ ಎಲ್ಲೆಡೆಯೂ ಪಸರಿಸುತ್ತಿದ್ದಾರೆ. ಯುವಕರು ದುಶ್ಚಟಗಳಿಗೆ ಬಲಿಯಾಗದಂತೆ ಸಂಚಾರಿ ಶಿವಾನುಭವ ಗೋಷ್ಠಿಗಳನ್ನು ಏರ್ಪಡಿಸುವುದು, ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ಶ್ರಮದಾನ ಕೈಗೊಳ್ಳುವುದು ಇವರ ನಿತ್ಯದ ಕಾಯಕ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸ್ವಂತ ಖರ್ಚಿನಲ್ಲೇ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಾ ನಾಡಿಗೆ ಮಾದರಿಯಾಗಿದ್ದಾರೆ.