ನಾಪೋಕ್ಲು: ಮಲ್ಮ ಬಚಾವೋ ವಿಶೇಷ ಆಂದೋಲನ ಸಮಿತಿ ರಚಿಸಿ ಹೋರಾಡಲು ವಿಶೇಷ ಗ್ರಾಮಸಭೆಯಲ್ಲಿ ನಿರ್ಧರಿಸಲಾಗಿದೆ. ಕುಡಿಯುವ ನೀರಿನ ಮೂಲಗಳಿಗೆ ಧಕ್ಕೆ, ಕಾಮಗಾರಿಗಳಿಂದ ಭೂಕುಸಿತವಾಗುವ ಸಂಭವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ, ಪರಿಸರ ಮಾಲಿನ್ಯ, ವಾಣಿಜ್ಯ ಬಳಕೆಗೆ ನಿರ್ಬಂಧ, ಕೃಷಿ ಬಳಕೆಗೆ ಸಹಮತ, ಇನ್ನಿತರ ವಿಷಯಗಳ ಬಗ್ಗೆ ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಇಗ್ಗುತಪ್ಪ ದೇವಸ್ಥಾನದ ಮಲ್ಮಾ ಬೆಟ್ಟ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಬಲ್ಲಮಾವಟಿ ಗ್ರಾಪಂ ಸಭಾಂಗಣದಲ್ಲಿ ಶನಿವಾರ ನಡೆದ ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಬಲ್ಲಮಾವಟಿ ಗ್ರಾಪಂ ಆಡಳಿತಾಧಿಕಾರಿ, ಗಣಿ ಇಲಾಖೆ ಅಧಿಕಾರಿ ರಾಹುಲ್ ಎಂ.ಎಸ್. ಮಾತನಾಡಿ, ಗ್ರಾಪಂ ವತಿಯಿಂದ ವಿಶೇಷ ಗ್ರಾಮಸಭೆಯಲ್ಲಿನ ಗ್ರಾಮಸ್ಥರ ನಿರ್ಣಯದ ಪ್ರತಿಯನ್ನು ಉನ್ನತಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು. ಕಂದಾಯ ಅಧಿಕಾರಿ ರವಿಕುಮಾರ್ ಮಾತನಾಡಿ, ಮಲ್ಮ ಪರಿಸರದಲಿ ಕಾನೂನು ಮೀರಿ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಂಡರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪೂಣಚ್ಚ ಮಾತನಾಡಿ, ನೆಲಜಿ ಗ್ರಾಮದ ಶ್ರಿ ಇಗ್ಗುತ್ತಪ್ಪ ದೇವಸ್ಥಾನ ಹಾಗೂ ಮಲ್ಮ ಬೆಟ್ಟದ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾಮಗಾರಿ ವಿರುದ್ಧ ಗ್ರಾಮಸ್ಥರು ಕೈಗೊಂಡ ನಿರ್ಣಯವನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುಲಿಕೋಟು ಗ್ರಾಮದ ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ, ಮಲ್ಮ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬಂಧಿಸಿದ ಪವಿತ್ರ ನೆಲೆಯಾಗಿದ್ದು, ಇಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಪ್ರವಾಸೋದ್ಯಮ ಸೇರಿದಂತೆ ಇತರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಮಲ್ಮ ತಪ್ಪಲಿನಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಬಲವಂತದಿಂದ ಅಂತಹ ಚಟುವಟಿಕೆಗಳನ್ನು ಕೈಗೊಂಡರೆ ಮಲ್ಮದಿಂದ ಮಡಿಕೇರಿಗೆ ಪಾದಯಾತ್ರೆ ನಡೆಸಿ ನಿರಂತರ ಹೋರಾಟ ಮಾಡಲಾಗುವುದು ಎಂದರು. ಬಲ್ಲಮಾವಟಿ ಗ್ರಾಪಂ ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ ಮಾತನಾಡಿ, ಎಲ್ಲರೂ ಪಕ್ಷಾತೀತವಾಗಿ ಈ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದರು. ಗ್ರಾಪಂ ಮಾಜಿ ಸದಸ್ಯ ಮಚ್ಚುರ ರವೀಂದ್ರ ಮಾತನಾಡಿ, ಆಧುನಿಕ ಯಂತ್ರಗಳ ಮೂಲಕ ಮಲ್ಮ ಬೆಟ್ಟದ ಸುತ್ತಲಿನ ಪರಿಸರದ ಪ್ರಕೃತಿ ನಾಶವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಲಾಗುತ್ತಿದೆ. ಈ ಹಿಂದೆ ನೆಲಜಿ ಗ್ರಾಮದಲ್ಲಿ ಮೂರು ದೇವಾಲಯಗಳ ಸಮಿತಿ ಸದಸ್ಯರು, ಅಖಿಲ ಕೊಡುವ ಸಮಾಜದ ಅಧ್ಯಕ್ಷರು ಹಾಗೂ ಗ್ರಾಮಸ್ಥರ ಸಭೆ ನಡೆಸಿ ಇದರ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ ಎಂದರು.ಅಖಿಲ ಕೊಡವ ಸಮಾಜದ ಅಧ್ಯಕ್ಷ, ಪಾಡಿ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷರಾಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕಳೆದ ಬಾರಿ ಕೇರಳದ ವೈನಾಡಿನಲ್ಲಿ ಭೂಕುಸಿತ ಉಂಟಾಗಿತ್ತು. ಅದೇ ರೀತಿ ಮಲ್ಮ ಬೆಟ್ಟ ಆಗುವುದು ಬೇಡ. ಎಂದರು.

ಗ್ರಾಪಂ ಮಾಜಿ ಅಧ್ಯಕ್ಷೆ ಕರವಂಡ ಸರಸು ಪೆಮ್ಮಯ್ಯ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ, ನೆರವಂಡ ಉಮೇಶ್ ಮಾತನಾಡಿದರು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಎಲ್ಲರೂ ಕೈ ಎತ್ತುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸ್ಥಳೀಯರು, ಸುತ್ತಮುತ್ತಲ ಗ್ರಾಮಸ್ಥರು ಭಾಗಿಗಳಾಗಿದ್ದರು.