ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆಇಲ್ಲಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟು ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ಅಪಹರಿಸಿ ಹಲ್ಲೆ ನಡೆಸಿ, ಬೋಟಿನಲ್ಲಿದ್ದ ಮೀನು, ಡಿಸೇಲ್ ಲೂಟಿ ಮಾಡಿದ್ದ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳನ್ನು ಭಟ್ಕಳದ ಸುಬ್ರಹ್ಮಣ್ಯ ಖಾರ್ವಿ (34), ರಾಘವೇಂದ್ರ ಖಾರ್ವಿ (38), ಹರೀಶ್ ನಾರಾಯಣ ಖಾರ್ವಿ (40), ನಾಗೇಶ್ ನಾರಾಯಣ (42), ಬಂದರು ಸಮೀಪದ ಬೆಳ್ಳಿಯ ಗೋಪಾಲ ಮಾಧವ್ (38), ಭಟ್ಕಳದ ಸಂತೋಷ ದೇವಯ್ಯ (43) ಹಾಗೂ ಲಕ್ಷ್ಮಣ್ (50) ಎಂದು ಗುರುತಿಸಲಾಗಿದೆ.ಫೆ.19ರಂದು ಕೊಡವೂರಿನ ಚೇತನ್ ಸಾಲ್ಯಾನ್ ಎಂಬವರ ಮಾಲಕತ್ವದ ಕೃಷ್ಣನಂದನ ಎಂಬ ಬೋಟು ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೀನು ಹಿಡಿದು ಹಿಂದಕ್ಕೆ ಬರುತ್ತಿದ್ದಾಗ ಫೆ.27ರಂದು ಭಟ್ಕಳದ ಬಳಿ ಬೋಟು ತಾಂತ್ರಿಕ ಕಾರಣಗಳಿಂದ ನಿಂತು ಬಿಟ್ಟಿತು. ಆಗ ಹಠತ್ತಾನೇ ಸುಮಾರು 25 ಮಂದಿ ಬಂದು ಕೃಷ್ಣನಂದನ ಬೋಟನ್ನು ವಶಕ್ಕೆ ಪಡೆದು ದಡಕ್ಕೆ ಎಳೆದುಕೊಂಡು ಹೋದರು. ಅಲ್ಲಿ ಬೋಟಿನಲ್ಲಿದ್ದ ಮೀನುಗಾರರ ಮೇಲೆ ಹಲ್ಲೆ ನಡೆಸಿ, ಬೋಟಿನಲ್ಲಿದ್ದ 8 ಲಕ್ಷ ರು.ಗಳ ಮೀನು ಮತ್ತು 5.76 ಲಕ್ಷ ರು. ಮೌಲ್ಯದ ಡಿಸೆಲ್ ಲೂಟಿ ಮಾಡಿದ್ದರು.ನಂತರ ಬೋಟಿನಲ್ಲಿದ್ದ ಮೀನುಗಾರರಲ್ಲೊಬ್ಬರು ಮಾಲಕ ಚೇತನ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ನೀಡಿದ ದೂರಿನಂತೆ ಪೊಲೀಸರು ಭಟ್ಕಳಕ್ಕೆ ಹೋಗಿ ಮೀನುಗಾರರನ್ನು ಹಿಂದಕ್ಕೆ ಕರೆ ತಂದಿದ್ದರು. ಅಪಹರಣಕಾರರು ತಲೆಮರೆಸಿಕೊಂಡಿದ್ದರು.ಈ ಬಗ್ಗೆ ಮಲ್ಪೆ ಠಾಣೆಯ ಎಸೈ ಪ್ರವೀಣ್ ಕುಮಾರ್ ಅವರು ತನಿಖೆ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಶುಕ್ರವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.