ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆ
ದೇವರು ಮಾನವರ ಮೇಲೆ ತೋರುವ ಪ್ರೀತಿ ಶಾಶ್ವತವಾಗಿದ್ದು, ಅದಕ್ಕೆ ಎಂದಿಗೂ ಅಂತ್ಯವಿರುವುದಿಲ್ಲ. ದೇವರಲ್ಲಿ ನಮ್ಮ ವಿಶ್ವಾಸವನ್ನು ಕಡಿಮೆಗೊಳಿಸದೆ ಜೀವಿಸಿದಾಗ ಎಂದಿಗೂ ನಿಷ್ಕ್ರೀಯಗೊಳಿಸಲು ಬಿಡುವುದಿಲ್ಲ ಎಂದು ಮಂಗಳೂರು ಬಿಕರ್ನಕಟ್ಟೆ ಇನ್ಫೆಂಟ್ ಜೀಸಸ್ ಚರ್ಚಿನ ಧರ್ಮಗುರು ಸ್ಟೀಫನ್ ಪಿರೇರಾ ಹೇಳಿದರು.ಅವರು ಶನಿವಾರ ತೊಟ್ಟಂ ಚರ್ಚಿನ ಪಾಲಕರಾದ ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಅವರ ವಾರ್ಷಿಕ ಸ್ಮರಣೆಯ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು.ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ತಮ್ಮ ಜೀವನದಲ್ಲಿ ಎಂದಿಗೂ ಕೂಡ ದೇವರಲ್ಲಿ ಸದಾ ವಿಶ್ವಾಸಿಗಳಾಗಿ ಬದುಕಿದರು. ಪ್ರತಿಯೊಂದು ಕುಟುಂಬವೂ ಕೂಡ ಅವರ ಮಾರ್ಗದಲ್ಲಿ ನಡೆದಾಗ ನಮ್ಮೆಲ್ಲರ ಕುಟುಂಬಗಳೂ ಕೂಡ ಆಶೀರ್ವದಿಸಲ್ಪಡುತ್ತವೆ. ನಮ್ಮ ನೆರೆಹೊರೆಯಲ್ಲಿರುವ ನಿರ್ಗತಿಕರೊಂದಿಗೆ ಪ್ರೀತಿ ವಿಶ್ವಾಸವನ್ನು ತೋರುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗೋಣ ಎಂದರು.ಚರ್ಚಿನ ಪ್ರಧಾನ ಧರ್ಮಗುರು ಡೆನಿಸ್ ಡೆಸಾ ಮಾತನಾಡಿ, ಸಂತ ಅನ್ನಮ್ಮ ಮತ್ತು ಸಂತ ಜೋಕಿಮ್ ಹಿರಿಯರ ಪಾಲಕಿಯರಾಗಿದ್ದು, ಇಂದಿನ ದಿನಗಳಲ್ಲಿ ನಮ್ಮ ಅಜ್ಜ ಅಜ್ಜಿಯಂದಿರನ್ನು ಮನೆಯಲ್ಲಿ ಇರಿಸದೆ ಆಶ್ರಮಗಳಲ್ಲಿ ಇರಿಸುವುದನ್ನು ಹೆಚ್ಚಾಗಿ ಕಾಣುತ್ತೇವೆ. ಹಿರಿ ಜೀವಗಳು ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದರೊಂದಿಗೆ ಉತ್ತಮ ಜೀವನ ನಡೆಸಲು ಮಾರ್ಗದರ್ಶಕರಾಗುತ್ತಾರೆ. ಅವರು ಕಲಿಸುವ ತಾಳ್ಮೆ ಹಾಗೂ ಸಹನೆಯ ಪಾಠಗಳು ಸದಾ ನಮಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.ಹಬ್ಬದ ಆಚರಣೆಗೆ ಪ್ರಾಯೋಜಕತ್ವ ವಹಿಸಿದವರನ್ನು ಬಲಿಪೂಜೆಯ ಸಂದರ್ಭದಲ್ಲಿ ಗೌರವಿಸಲಾಯಿತು.ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ವಲಯ ಪ್ರಧಾನ ಧರ್ಮಗುರು ಚಾರ್ಲ್ಸ್ ಮಿನೇಜಸ್, ಪೆರ್ನಾಲ್ ಚರ್ಚಿನ ಧರ್ಮಗುರು ಜೆರೋಮ್ ಮೊಂತೆರೋ, ವಿನ್ಸೆಂಟ್ ಕ್ರಾಸ್ತಾ, ಸುನೀಲ್ ಡಿಸಿಲ್ವಾ, ಪಿಲಿಪ್ ನೆರಿ ಆರಾನ್ಹಾ, ವಿಕ್ಟರ್ ಡಿಸೋಜಾ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ, ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.