ಮಲ್ಪೆ: ಮತದಾನ ಜಾಗೃತಿಗೆ ಮರಳು ಶಿಲ್ಪ!

| Published : Apr 08 2024, 01:04 AM IST

ಸಾರಾಂಶ

ಮತದಾನ ಮಾಡುವಂತೆ ಸಂದೇಶವನ್ನು ಸಾರುವ ಈ ಮರಳು ಶಿಲ್ಪವನ್ನು‘ಸ್ಯಾಂಡ್ ಥೀಂ’ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಗಾಗಿ ಉಡುಪಿ ಜಿಲ್ಲಾಡಳಿತ ವಿಭಿನ್ನ ಪ್ರಯೋಗಗಳನ್ನು ಕೈಗೊಳ‍್ಳುತ್ತಿದೆ. ಅದರಂತ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ ವತಿಯಿಂದ ಜನಜಾಗೃತಿಗಾಗಿ ಶನಿವಾರ ಸಂಜೆ ಮಲ್ಪೆ ಕಡಲ ತೀರದಲ್ಲಿ ಮರಳುಶಿಲ್ಪ ರಚಿಸಲಾಗಿತ್ತು.

‘ಚುನಾವಣಾ ಪರ್ವ ದೇಶದ ಗರ್ವ’ ಎನ್ನುವ ಸಂದೇಶದೊಂದಿಗೆ, ಜನರು ತಪ್ಪದೇ ಮತದಾನದಲ್ಲಿ ಭಾಗವಹಿಸುವಂತೆ, ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ನೈತಿಕವಾಗಿ ಮತದಾನ ಮಾಡುವಂತೆ ಸಂದೇಶವನ್ನು ಸಾರುವ ಈ ಮರಳು ಶಿಲ್ಪವನ್ನು‘ಸ್ಯಾಂಡ್ ಥೀಂ’ ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ರಚಿಸಿದ್ದರು.

ಈ ಸಂದರ್ಭದಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜು ಹಾಗೂ ಚಿಕ್ಕಮಗಳೂರು ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಗೋಪಾಲಕೃಷ್ಣ, ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್, ಚಿಕ್ಕಮಗಳೂರು ಪೊಲೀಸ್ ವರಿಷ್ಟಾಧಿಕಾರಿ ಡಾ. ವಿಕ್ರಮ್ ಅಮಟೆ, ಕರಾವಳಿ ಕಾವಲು ಎಸ್ಪಿ ಮಿಥುನ್, ಡಿಸಿಎಫ್ ಉಡುಪಿ ಗಣಪತಿ, ವೈಲ್ಡ್ ಲೈಫ್ ಶಿವರಾಮ್ ಬಾಬು ಮತ್ತಿತರರು ಹಾಜರಿದ್ದರು.

ವಾರಾಂತ್ಯದಲ್ಲಿ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದ್ದ ಸಾವಿರಾರು ಮಂದಿ ಪ್ರವಾಸಿಗರನ್ನು ಈ ಮರಳು ಶಿಲ್ಪ ಮನ ಸೆಳೆಯುತ್ತಿತ್ತು.