ಕೊಡವ ಸಂಸ್ಕೃತಿಗೆ ಮಲಯಾಳಿ ಸಮುದಾಯದಿಂದ ಧಕ್ಕೆಯಾಗುತ್ತಿದೆ ಎಂಬ ಅರ್ಥದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿರುವುದಕ್ಕೆ ಕೊಡಗಿನ ವಿವಿಧ ಮಲಯಾಳಿ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.

ಮಡಿಕೇರಿ: ಕೊಡವ ಸಂಸ್ಕೃತಿಗೆ ಮಲಯಾಳಿ ಸಮುದಾಯದಿಂದ ಧಕ್ಕೆಯಾಗುತ್ತಿದೆ ಎಂಬ ಅರ್ಥದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿರುವುದಕ್ಕೆ ಕೊಡಗಿನ ವಿವಿಧ ಮಲಯಾಳಿ ಸಂಘಟನೆಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ.

ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜ, ಎಸ್.ಎನ್.ಡಿ.ಪಿ, ತಿಯನ್ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಶುಕ್ರವಾರ ಸುದ್ದಿಗೋಷ್ಠಿ ನಡೆಸಿದವು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಲಯಾಳಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ಟಿ.ಕೆ. ಸುಧೀರ್, ಕೊಡಗು-ಕೇರಳ ಬಾಂಧವ್ಯ ತಲೆಮಾರುಗಳಿಂದ ಬೆಳೆದು ಬಂದಿದೆ. ವ್ಯಾಪಾರ, ಹಬ್ಬ, ಧಾರ್ಮಿಕ ಆಚರಣೆಗಳು ಈ ಬಾಂಧವ್ಯವನ್ನು ಗಟ್ಟಿಗೊಳಿಸಿವೆ. ಕೊಡಗಿನ ಹಲವು ದೇವಾಲಯಗಳ ಪೂಜಾ ಸಂಪ್ರದಾಯಗಳು ಕೇರಳದೊಂದಿಗೆ ನಂಟು ಹೊಂದಿವೆ. ಕೊಡಗಿನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಕೊಡವ ಸಮುದಾಯ ಸೇರಿದಂತೆ ಜಿಲ್ಲೆಯ ಎಲ್ಲ ಸಮುದಾಯಗಳೊಂದಿಗೆ ತಲೆಮಾರುಗಳಿಂದ ನೆರೆಹೊರೆಯವರಾಗಿ ಬದುಕುತ್ತಿದ್ದೇವೆ. ಆದರೆ, ಕ್ರೀಡಾ ಕಾರ್ಯಕ್ರಮವೊಂದರಲ್ಲಿ ಪ್ರತಾಪ್ ಸಿಂಹ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಹೇಳಿದರು.ನಮ್ಮ ಸಮುದಾಯದ ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಯಾವುದೇ ರಾಜಕೀಯ ನಾಯಕರಿಂದ ಪ್ರಮಾಣಪತ್ರ ಬೇಕಿಲ್ಲ. ಕೊಡಗಿನ ಜನರೊಂದಿಗೆ ನಾವು ಬೆಳೆಸಿಕೊಂಡಿರುವ ಪರಸ್ಪರ ವಿಶ್ವಾಸ ಮತ್ತು ಗೌರವವೇ ನಮ್ಮ ಸಹಬಾಳ್ವೆಗೆ ಸಾಕ್ಷಿಯಾಗಿದೆ. ಒಂದು ಸಮೀಕ್ಷೆಯ ಅಂದಾಜಿನ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಸುಮಾರು 45,000 ಮಲಯಾಳಿಗಳು ವಾಸಿಸುತ್ತಿದ್ದಾರೆ. ಜಿಲ್ಲೆಯ ಕೃಷಿ, ವ್ಯಾಪಾರ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಲ್ಲಿ ಸಮುದಾಯದವರು ತಮ್ಮ ಕೊಡುಗೆ ನೀಡುತ್ತಿದ್ದಾರೆ. ದೇಶದ ಅಭಿವೃದ್ಧಿಯಲ್ಲಿಯೂ ಮಲಯಾಳಿ ಸಮುದಾಯದವರು ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ಕ್ರೀಡೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ ಎಂದರು.ವೈವಿಧ್ಯದಲ್ಲಿ ಏಕತೆಯೇ ಭಾರತದ ಶಕ್ತಿ. ಸಾರ್ವಜನಿಕ ಜೀವನದಲ್ಲಿರುವವರು ಯಾವುದೇ ಸಮುದಾಯದ ಭಾವನೆಗೆ ಧಕ್ಕೆಯಾಗದಂತೆ ಜವಾಬ್ದಾರಿಯಿಂದ ಮಾತನಾಡಬೇಕು. ಒಂದು ಸಮುದಾಯದ ಮೇಲೆ ಒಟ್ಟಾಗಿ ಹೊಣೆ ಹೊರಿಸುವುದು ನಾಯಕತ್ವಕ್ಕೆ ತಕ್ಕದ್ದಲ್ಲ. ನಮಗೆ ಬೇಕಾಗಿರುವುದು ಸಂಘರ್ಷವಲ್ಲ, ಗೌರವ. ದ್ವೇಷವಲ್ಲ, ಸಹಬಾಳ್ವೆ. ಆದರೆ, ಆತ್ಮಗೌರವದ ವಿಚಾರದಲ್ಲಿ ಮೌನವಾಗಿರುವುದಿಲ್ಲ ಎಂದು ಎಚ್ಚರಿಸಿದರು.ಮಲಯಾಳಿಗಳು ತಪ್ಪು ಮಾಡಿದ ಸಾಕ್ಷ್ಯಗಳಿದ್ದರೆ ಜನರ ಮುಂದೆ ಇಡಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ ಇಡೀ ಸಮುದಾಯವನ್ನು ಅಪರಾಧಿಗಳಂತೆ ಬಿಂಬಿಸಬೇಡಿ. ಹೇಳಿಕೆ ಹಿಂಪಡೆಯದಿದ್ದರೆ ಮುಂದೆ ಆಗುವ ಪರಿಣಾಮಗಳಿಗೆ ಪ್ರತಾಪ್ ಸಿಂಹ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಎಸ್.ಎನ್.ಡಿ.ಪಿ ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ್, ವಿರಾಜಪೇಟೆ ಹಿಂದೂ ಮಲಯಾಳಿ ಸಂಘದ ಮಹಿಳಾ ಸಮಿತಿ ಅಧ್ಯಕ್ಷೆ ಶೀಭಾ ಪ್ರಥ್ವಿನಾಥ್, ಗೋಣಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್, ಜಿಲ್ಲಾ ತಿಯನ್ ಮಹಾಸಭಾದ ಉಪಾಧ್ಯಕ್ಷ ಎಸ್.ಆರ್. ಅಶೋಕ್ ಕುಮಾರ್ ಇದ್ದರು.