ಪತಿ ಮನೆ ಮುಂದೆ ಮಮತಾ ಶವ ಇಟ್ಟು ಆಕ್ರೋಶ

| Published : Jul 03 2024, 12:20 AM IST

ಸಾರಾಂಶ

ಎಸ್ಪಿ ಕಚೇರಿ ಆವರಣದಲ್ಲಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಕಾನ್ಸ್‌ಟೇಬಲ್‌ ಲೋಕನಾಥ್ ಮನೆ ಮುಂದೆ ಹತ್ಯೆಯಾದ ಮಮತಾಳ ಶವವಿಟ್ಟು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಲೋಕನಾಥ್‌ಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಎಸ್ಪಿ ಕಚೇರಿ ಆವರಣದಲ್ಲಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಕಾನ್ಸ್‌ಟೇಬಲ್‌ ಲೋಕನಾಥ್ ಮನೆ ಮುಂದೆ ಹತ್ಯೆಯಾದ ಮಮತಾಳ ಶವವಿಟ್ಟು ಪೋಷಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಆತನ ತಂದೆ ತಾಯಿಯನ್ನು ಕೂಡಲೇ ಬಂಧಿಸಬೇಕು. ಹಾಗೂ ಕೊಲೆ ಮಾಡಿದವನ ಕೆಲಸದಿಂದ ತೆಗೆದು ಹಾಕಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ನ್ಯಾಯ ಕೊಡಿಸುವುದಾಗಿ ಎಸ್ಪಿ ಭರವಸೆ ನೀಡಿದ ನಂತರ ಅಲ್ಲಿಂದ ಶವವನ್ನು ಸಂಸ್ಕಾರಕ್ಕೆ ಕೊಂಡೊಯ್ಯಲಾಯಿತು.

ಪೊಲೀಸ್ ಬಂದೋಬಸ್ತ್: ಚಾಕುವಿನಿಂದ ಇರಿದು ಪತ್ನಿ ಹತ್ಯೆ ಮಾಡಿದ್ದಕ್ಕೆ ಆಕ್ರೋಶಗೊಂಡು ಹಾಸನ ನಗರದ ಹೊಯ್ಸಳ ನಗರದಲ್ಲಿರುವ ಆರೋಪಿ ಪತಿ ಹೆಡ್‌ ಕಾನ್ಸಟೇಬಲ್ ಲೋಕನಾಥ್ ನಿವಾಸದೆದುರು ಮೃತ ಮಮತಾ ಶವವನ್ನು ಕೆಲ ಗಂಟೆಗಳ ಕಾಲ ಇಡಲಾಗಿತ್ತು. ಈ ವೇಳೆ ಲೋಕನಾಥ್ ತಂದೆ, ತಾಯಿಯನ್ನು ಬಂಧಿಸುವಂತೆ ಪೋಷಕರು ಒತ್ತಾಯಿಸಿದರು. ಲೋಕನಾಥ್‌ಗೆ ಅಕ್ರಮ ಸಂಬಂಧ ಇದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಮಮತಾ ಸಂಬಂಧಿಕರು ಆಗ್ರಹಿಸಿದರು. ಈ ವೇಳೆ ಮಮತಾ ಮೃತದೇಹದ ಮುಂದೆ ಪುತ್ರರು ಕಣ್ಣೀರಿಟ್ಟರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪುತ್ರನ ಸಿಟ್ಟು: ಮಮತಾ ಮೃತದೇಹ ನೋಡಲು ಬಂದ ಆಕೆಯ ಸಹೋದರನ ಪತ್ನಿ ವಿರುದ್ಧ ಪುತ್ರ ಸಿಟ್ಟು ಹೊರಹಾಕಿದ್ದು ಕಂಡುಬಂತು. ಮೃತ ಮಮತಾಳ ಪುತ್ರ "ನೀನು ಇಲ್ಲಿಗೆ ಬರಬೇಡ ಹೋಗು " ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಮಮತಾಳ ಸಹೋದರನ ಪತ್ನಿಯನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.

ಕೊಲೆಯಾದ ಮಮತಾ ಅವರ ತಂದೆ ತಾಯಿ ಮಾಧ್ಯಮದೊಂದಿಗೆ ಮಾತನಾಡಿ, ಲೋಕನಾಥ್ ಎಂಬಾತ ೧೭ ವರ್ಷಗಳ ಹಿಂದೆ ತನ್ನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಆರಂಭದ ದಿನದಿಂದಲೂ ಹೆಂಡತಿಗೆ ಕಿರುಕುಳ ಕೊಡಲಾಗುತಿತ್ತು ಎನ್ನಲಾಗಿದ್ದು, ಆಸ್ತಿ, ಸೈಟ್ ಹಾಗು ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಅಳಿಯ ಲೋಕನಾಥ್ ಬಗ್ಗೆ ಮಮತಾ ತಂದೆ ಶಾಮಣ್ಣ ಮತ್ತು ತಾಯಿ ಗಂಭೀರವಾಗಿ ಆರೋಪಿಸಿದ್ದಾರೆ. ಈ ಹಿಂದೆ ಕೂಡ ನನ್ನ ಮಗಳಿಗೆ ಲೋಕನಾಥ್ ದೈಹಿಕವಾಗಿ ಹಲ್ಲೆ ಮಾಡಿದ್ದು, ಸಾಕಷ್ಟು ಕಿರುಕುಳ ಕೊಟ್ಟರೂ ಮಗಳು ಎಲ್ಲವನ್ನು ಸಹಿಸಿಕೊಂಡು ಸುಮ್ಮನಿದ್ದಳು. ಪೊಲೀಸರಿಗೆ ದೂರು ಕೊಡು ಎಂದರೆ ಮರ್ಯಾದೆಗೆ ಅಂಜಿ ಸುಮ್ಮನಾಗಿದ್ದಳು. ಈಗ ಮೂರು ದಿನಗಳಿಂದ ಏನಾಯಿತೋ ಗೊತ್ತಿಲ್ಲ. ಮಗಳನ್ನ ಬರ್ಬರವಾಗಿ ಕೊಂದಿದ್ದಾನೆ. ಹಿಂದಿನ ದಿನ ಮನೆಗೆ ಬಂದು ಹೆಂಡತಿಗೆ ಮತ್ತು ಮಕ್ಕಳಿಗೆ ಹೊಡೆದಿದ್ದು, ಅವನಿಗೆ ಕಠಿಣ ಶಿಕ್ಷೆ ಆಗಬೇಕು. ಅವನನ್ನು ಕೆಲಸದಿಂದ ತೆಗೆದು ಹಾಕಿ ಎಂದು ಆಗ್ರಹಿಸಿದರು. ಇಲ್ಲಿ ಪ್ರತಿಭಟನೆ ಮಾಡುತ್ತಿಲ್ಲ. ಮಗಳ ಸಾವಿಗೆ ನ್ಯಾಯ ಕೊಡಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಭರವಸೆ ನೀಡಿರುವುದರಿಂದ ಎರಡು ದಿನ ಕಾದು ನಂತರ ನೋಡುತ್ತೇವೆ. ಕಾನೂನು ಸುವ್ಯವಸ್ಥೆಗೆ ನಾವು ತೊಂದರೆ ಮಾಡುವುದಿಲ್ಲ ಎಂದರು.

ಸಾಕುನಾಯಿಯ ರೋದನೆ:ಕೊಲೆಯಾದ ಮಮತಾ ಶವದೆದುರು ಆಕೆಯ ಸಾಕುನಾಯಿಯ ರೋದನೆ ಕಂಡು ಬಂದಿತು. ಕಣ್ಣೀರಿಡುತ್ತಲೆ ಮಮತಾ ಪುತ್ರ ತಮ್ಮ ನಾಯಿಯನ್ನು ಸಮಾಧಾನಪಡಿಸಿದರು. ಆ್ಯಂಬುಲೆನ್ಸ್‌ನಲ್ಲಿ ಶವದ ಮುಂದೆಯೇ ಶ್ವಾನ ಕುಳಿತಿತ್ತು. ಪ್ರೀತಿಯಿಂದ ಸಾಕಿದ ಮನೆ ಒಡತಿಯ ಮೃತದೇಹದ ಎದುರು ನಾಯಿಯ ಮೂಕರೋದನೆ ನೋಡಿದವರು ಕೊಲೆ ಮಾಡಿದವರ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದರು. ಕೂಡಲೇ ಮಮತಾ ಸಾವಿಗೆ ಕಾರಣರಾದವರ ಬಂಧನ ಮಾಡುವಂತೆ ಆಗ್ರಹಿಸಿದರು. ನಂತರ ಮೃತ ದೇಹವನ್ನು ಆ್ಯಂಬುಲೆನ್ಸ್ ಮೂಲಕ ಶವ ಸಂಸ್ಕಾರಕ್ಕೆ ಕೊಂಡೊಯ್ಯಲಾಯಿತು.