ಸಾರಾಂಶ
ಶಿರಹಟ್ಟಿ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರಿಶ್ಚಿಯನ್‌ರು ಮುಗ್ಧ ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ. ಇತ್ತೀಚೆಗೆ ಬೆಳ್ಳಟ್ಟಿ ಗ್ರಾಮದಲ್ಲಿ ಆಮಿಷ ನಿರಾಕರಿಸಿ ಮತಾಂತರಕ್ಕೆ ಒಪ್ಪದಿದ್ದ ವ್ಯಕ್ತಿಯ ಕೊಲೆಯಾಗಿದೆ. ಅಧಿಕಾರಿಗಳು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಲಾಯಿತು.ಹಿಂದೂಪರ ಸಂಘಟನೆಗಳ ಮುಖಂಡ ಸಂತೋಷ ಕುರಿ, ನಾಗರಾಜ ಲಕ್ಕುಂಡಿ ನೇತೃತ್ವದಲ್ಲಿ ಬುಧವಾರ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮುಖಂಡರು ಮಾತನಾಡಿ, ಮುಗ್ಧ ಹಿಂದೂಗಳು ಆಮಿಷಕ್ಕೆ ಬಲಿಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಕಳೆದ ಅ. ೨೭ರಂದು ತಾಲೂಕಿನ ಬೆಳ್ಳಟ್ಟಿ ಗ್ರಾಮದ ಚರ್ಚ್‌ನಲ್ಲಿ ತಿಪ್ಪಣ್ಣ ವಡ್ಡರ ಎಂಬ ಭೋವಿ ಸಮಾಜದ ವ್ಯಕ್ತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ.ಈ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಈಗಾಗಲೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ. ತಿಪ್ಪಣ್ಣ ವಡ್ಡರ ಮಾತ್ರ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಲ್ಲಿ ತನ್ನ ಕುಲದೈವ ಸಿದ್ಧರಾಮೇಶ್ವರ ದೇವರು ತನ್ನನ್ನು ಕ್ಷಮಿಸುವುದಿಲ್ಲ. ಜೀವ ಇರುವವರೆಗೂ ಹಿಂದೂ ಭೋವಿ ವಡ್ಡರ ಸಮಾಜದಲ್ಲಿಯೇ ಇರುತ್ತೇನೆಂದು ಹೇಳಿದ್ದರು ಎನ್ನಲಾಗಿದ್ದು, ಈ ರೀತಿ ವಿರೋಧಿಸಿದ್ದಕ್ಕೆ ಇವರ ಕೊಲೆಯಾಗಿದೆ. ಇದು ಆತ್ಮಹತ್ಯೆಯಲ್ಲ. ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.ತಿಪ್ಪಣ್ಣ ವಡ್ಡರ ಯಾವುದೇ ಆಮಿಷಗಳಿಗೆ ಬಗ್ಗದಿರುವುದನ್ನು ಮನಗಂಡು ಚರ್ಚ್‌ನ ಅಧಿಕಾರಿಗಳು ಅವರನ್ನು ಕರೆತಂದು ಚಿತ್ರಹಿಂಸೆ ನೀಡಿದ್ದಾರೆ. ಚಿತ್ರಹಿಂಸೆಗೂ ಬಗ್ಗದೇ ಇರುವುದನ್ನು ಗಮನಿಸಿ ಅವರನ್ನು ಕೊಲೆ ಮಾಡಿ ನೇಣು ಹಾಕಿಕೊಂಡಂತೆ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿಯೂ ಕ್ರಿಶ್ಚಿಯನ್‌ರು ಸೇವೆಯ ಹೆಸರಿನಲ್ಲಿ ಮತಾಂತರವನ್ನು ಅವ್ಯಾಹತವಾಗಿ ಮುಂದುವರಿಸಿದ್ದಾರೆ. ಮುಗ್ಧ ಹಿಂದೂಗಳಿಗೆ ಮತಾಂತರದ ಅರಿವಾಗುತ್ತಿಲ್ಲ. ಚರ್ಚ್‌ನಲ್ಲಿ ನಿಗೂಢ ರೀತಿಯಲ್ಲಿ ದೊರೆತಿರುವ ತಿಪ್ಪಣ್ಣ ವಡ್ಡರ ಶವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಿಪ್ಪಣ್ಣ ವಡ್ಡರ ಕುಟುಂಬಕ್ಕೆ ಸರ್ಕಾರದಿಂದ ಐವತ್ತು ಲಕ್ಷ ರುಪಾಯಿಗಳ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ನಂತರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಮನವಿ ಸ್ವೀಕರಿಸಿದರು. ಮನವಿ ನೀಡುವ ಸಂದರ್ಭದಲ್ಲಿ ಶಶಿ ಪೂಜಾರ, ಯಲ್ಲಪ್ಪ ಇಂಗಳಗಿ, ಪರಶುರಮ ಡೊಂಕಬಳ್ಳಿ, ದೇವಪ್ಪ ಪೂಜಾರ, ಮಂಜುನಾಥ ಸೊಂಟನೂರ, ನಾಗರಾಜ ಇಂಗಳಗಿ, ವೀರಣ್ಣ ಅಂಗಡಿ, ಶಿವಾನಂದ ಬಟ್ಟೂರ, ಬಸನಗೌಡ ಪಾಟೀಲ, ಪ್ರಕಾಶ ಶಿರಹಟ್ಟಿ, ಮುತ್ತು ಬೂದಿಹಾಳ, ಆನಂದ ಸತ್ಯಮ್ಮನವರ, ಗೌತಮ ಹಳ್ಳೆಮ್ಮನವರ ಉಪಸ್ಥಿತರಿದ್ದರು.
;Resize=(128,128))
;Resize=(128,128))