ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆಯಲ್ಲಿ ದುರುದ್ದೇಶಪೂರ್ವಕವಾಗಿ ಮೊಳೆಗಳನ್ನು ಎಸೆದು ವಾಹನಗಳಿಗೆ ಪಂಕ್ಚರ್ ಮಾಡಿಸಿ ತರುವಾಯ ಆ ವಾಹನಗಳಿಗೆ ತಾನೇ ಗಾಳಿ ತುಂಬಿ ಹಣ ಸಂಪಾದಿಸುತ್ತಿದ್ದ ಚಾಲಾಕಿ ಪಂಕ್ಚರ್ ಅಂಗಡಿ ಮಾಲಿಕನೊಬ್ಬ ಈಗ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿದ್ದಾನೆ.ಮೈಸೂರು ರಸ್ತೆಯ ಬ್ಯಾಟರಾಯನಪುರದ ನಿವಾಸಿ ಯಾರಬ್ ಬೇಗ್ ಎಂಬಾತ ಬಂಧಿತನಾಗಿದ್ದು, ಹೆಬ್ಬಾಳ-ಗೊರಗುಂಟೆಪಾಳ್ಯ ಹೊರ ವರ್ತುಲ ರಸ್ತೆಯ ಎಂಇಎಸ್ ಮೇಲ್ಸೇತುವೆಯಲ್ಲಿ ಈ ಕೃತ್ಯ ಎಸಗಿದ್ದ.
ಯಾರಬ್ ಮೇಲ್ಸೇತುವೆಯಲ್ಲಿ ತನ್ನ ಸಹಚರನ ಜತೆ ಬೈಕ್‌ನಲ್ಲಿ ಮೊಳೆಗಳನ್ನು ತಂದು ಬಿಸಾಡಿ ತೆರಳುವ ದೃಶ್ಯಾವಳಿ ಸಂಚಾರ ಪೊಲೀಸರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಿಕ್ಕಿಬಿದ್ದಿದ್ದು ಹೇಗೆ?:
ಹಲವು ದಿನಗಳಿಂದ ಗೋರಗುಂಟೆಪಾಳ್ಯ-ಹೆಬ್ಬಾಳದ ಹೊರವರ್ತುಲ ರಸ್ತೆಯಲ್ಲಿ ಪಂಕ್ಚರ್ ಅಂಗಡಿಯನ್ನು ಯಾರಬ್ ಇಟ್ಟಿದ್ದು, ತನ್ನ ಅಂಗಡಿ ವಹಿವಾಟಿಗೆ ಆತ ದುಷ್ಟಬುದ್ಧಿ ಅನುಸರಿಸಿದ್ದಾನೆ. ಆ ರಸ್ತೆಯ ಮೇಲ್ಸೇತುವೆ ಸೇರಿದಂತೆ ಆಜುಬಾಜಿನಲ್ಲಿ ಮೊಳೆಗಳನ್ನು ಚೆಲ್ಲಾಡಿ ಬರುತ್ತಿದ್ದ. ಆ ರಸ್ತೆಯಲ್ಲಿ ಸಾಗುವ ವಾಹನಗಳಿಗೆ ಮೊಳೆಗಳು ಚುಚ್ಚಿಕೊಂಡು ಪಂಕ್ಚರ್ ಆಗುತ್ತಿದ್ದವು. ಆಗ ಆ ವಾಹನಗಳು ಅಲ್ಲೇ ಹತ್ತಿರದಲ್ಲಿದ್ದ ಯಾರಬ್ ಅಂಗಡಿಗೆ ತೆರಳಬೇಕಾಗುತ್ತದೆ.
ಮೊಳೆಗಳಿಂದ ವಾಹನಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಾಲಹಳ್ಳಿ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಆ ರಸ್ತೆಯಲ್ಲಿ ಮ್ಯಾಗ್ನೇಟ್ ಹಿಡಿದು ಇನ್ಸ್‌ಪೆಕ್ಟರ್ ಶೇಖರ್ ತಂಡವು ತಪಾಸಣೆ ನಡೆಸಿದಾಗ ಮೊಳೆಗಳ ರಾಶಿಯೇ ಪತ್ತೆಯಾಗಿದೆ. ಈ ಕೃತ್ಯವು ದುರುದ್ದೇಶ ಪೂರ್ವಕವಾಗಿ ನಡೆದಿದೆ ಎಂಬುದು ಪೊಲೀಸರಿಗೆ ಶಂಕೆ ಮೂಡಿದೆ. ಅಲ್ಲದೆ ಯಾರಬ್ ಮೇಲೆ ಸ್ಥಳೀಯರು ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ
ಸುಳಿವು ಆಧರಿಸಿ ತನಿಖೆಗಿಳಿದ ಪೊಲೀಸರು, ಆ ಹೆದ್ದಾರಿಯಲ್ಲಿ ಸಂಚಾರ ಪೊಲೀಸರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಯಾರಬ್ ಚಲನವಲನ ದೃಶ್ಯಗಳು ಸಿಕ್ಕಿವೆ. ತಕ್ಷಣವೇ ಜಾಲಹಳ್ಳಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಠಾಣೆಯಲ್ಲಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಯಾರಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ‘ಮೊಳೆ ರಹಸ್ಯ’ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.ವಿಡಿಯೋ ವೈರಲ್:
ಮೇಲ್ಸೇತುವೆಯಲ್ಲಿ ಮೊಳೆ ತಂದು ಯಾರಬ್ ಹಾಕುವ ಸಿಸಿಟಿವಿ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರ ಪೊಲೀಸರು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆರೋಪಿ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವವರ ಬಗ್ಗೆ ಅಸ್ತ್ರಂ ಆ್ಯಪ್ ಮೂಲಕ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.