ಸಾರಾಂಶ
ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಆಡುಗೋಡಿ ಸಮೀಪ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಯಲ್ಲಿ ಏಕಾಂಗಿಯಾಗಿದ್ದಾಗ ಮಾನಸಿಕ ಅಸ್ವಸ್ಥ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನೊಬ್ಬನನ್ನು ಸ್ಥಳೀಯರು ಹಿಡಿದು ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಆಡುಗೋಡಿ ಸಮೀಪ ನಡೆದಿದೆ.ಲಕ್ಷ್ಮಣ್ ನಗರ ಸಮೀಪ ನಿವಾಸಿ ವಿಘ್ನೇಶ್ ಅಲಿಯಾಸ್ ಕಾಡು ಬಂಧಿತನಾಗಿದ್ದು, ಮೂರು ದಿನಗಳ ಹಿಂದೆ ಸಂಬಂಧಿಕರ ಮದುವೆ ಸಲುವಾಗಿ ಯುವತಿ ಪೋಷಕರು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪೋಷಕರ ಜತೆ ಬುದ್ಧಿಮಾಂಧ್ಯ ಹಾಗೂ ಅಂಗವಿಕಲಳಾಗಿರುವ ಸಂತ್ರಸ್ತ ಯುವತಿ ವಾಸವಾಗಿದ್ದಾಳೆ. ಆಕೆಯ ಮನೆ ಸಮೀಪದಲ್ಲೇ ಆರೋಪಿ ಸಹ ವಾಸವಾಗಿದ್ದ. ಕಳೆದ ಸೋಮವಾರ ಸಂಬಂಧಿಕರ ಮದುವೆ ಸಲುವಾಗಿ ಆಕೆಯ ಪೋಷಕರು ಹೊರ ಹೋಗಿದ್ದರು. ಆಗ ಬೆಳಗ್ಗೆ 11 ಗಂಟೆಗೆ ಮನೆಗೆ ನುಗ್ಗಿ ಆಕೆಗೆ ಲೈಂಗಿಕ ಶೋಷಣೆ ಮಾಡಲು ವಿಘ್ನೇಶ್ ಯತ್ನಿಸಿದ್ದಾನೆ.ಅಷ್ಟರಲ್ಲಿ ಮದುವೆ ಮುಗಿಸಿ ಯುವತಿ ತಾಯಿ ಮನೆಗೆ ಮರಳಿದ್ದಾರೆ. ಆಗ ಕೊಠಡಿಯಲ್ಲಿ ಭೀತಿಗೊಂಡು ಕುಳಿತಿದ್ದ ಮಗಳನ್ನು ಸಮಾಧಾನಪಡಿಸಿ ವಿಚಾರಿಸಿದಾಗ ಅದೇ ಕೋಣೆಯಲ್ಲಿ ಅವಿತುಕೊಂಡಿದ್ದ ವಿಘ್ನೇಶ್ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾಳೆ. ಕೂಡಲೇ ಆತನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟರಲ್ಲಿ ಮಾಹಿತಿ ಪಡೆದ ಆಡುಗೋಡಿ ಠಾಣೆ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ನಂತರ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))