ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎಂದು ಭಾವಿಸಲಾದ 67 ವರ್ಷದ ಕೇರಳದ ಪವಿತ್ರನ್ ಎಂಬವರು ಅಂತ್ಯಕ್ರಿಯೆಗೆ ಕೆಲವು ಗಂಟೆಗಳ ಮುನ್ನವೇ ಪುನರ್ಜೀವ ಪಡೆದ ವಿದ್ಯಮಾನ ಸಂಭವಿಸಿದೆ.ಕೇರಳ ಮೂಲದ ಪವಿತ್ರನ್ ಅವರು ತೀವ್ರವಾದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ವೈದ್ಯರು, ಯಾವುದೇ ಭರವಸೆ ಇಲ್ಲ ಎಂದು ಕುಟುಂಬಕ್ಕೆ ತಿಳಿಸಿದರು. ಸೋಮವಾರ ಸಂಜೆಯ ವೇಳೆ ಪವಿತ್ರನ್ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಘೋಷಿಸಿದ್ದಾಗಿ ಕುಟುಂಬಸ್ಥರು ತಿಳಿಸಿದ್ದರು. ಬಳಿಕ ಮೃತದೇಹವನ್ನು ಹಸ್ತಾಂತರಿಸುವ ಮೊದಲು ವೈದ್ಯಕೀಯ ಬಾಕಿಯನ್ನು ಪಾವತಿಸುವಂತೆ ಕುಟುಂಬಕ್ಕೆ ಆಸ್ಪತ್ರೆ ತಿಳಿಸಿತ್ತು. ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಆಗಲೇ ಮಾಡಿಕೊಂಡಿದ್ದ ಕುಟುಂಬಸ್ಥರು ಪವಿತ್ರನ್ ಅವರ ದೇಹವನ್ನು ಅವರ ತವರೂರಾದ ಕಣ್ಣೂರಿಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಮಂಗಳೂರಿನಿಂದ ಕಣ್ಣೂರಿಗೆ ಐದು ಗಂಟೆಗಳ ಕಾಲ ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಕಣ್ಣೂರಿನ ಎ.ಕೆ.ಜಿ. ಆಸ್ಪತ್ರೆಯಲ್ಲಿ ಅವರ ದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸುತ್ತಿದ್ದಾಗ ಅಚ್ಚರಿ ಕಾದಿತ್ತು.
ಅಲ್ಲಿ ಆಸ್ಪತ್ರೆಯ ಸಿಬ್ಬಂದಿ ಪವಿತ್ರನ್ ಅವರ ಕೈಯಲ್ಲಿ ಸ್ವಲ್ಪ ಚಲನೆಯನ್ನು ಗಮನಿಸಿದ್ದರು. ಮತ್ತೆ ಗಮನವಿಟ್ಟು ನೋಡಿದಾಗ ಜೀವ ಇದೆ ಎಂದು ಅರಿತು ಪವಿತ್ರನ್ ಅವರನ್ನು ತುರ್ತು ವಿಭಾಗಕ್ಕೆ ಸ್ಥಳಾಂತರಿಸಿದ್ದರು. ಅಲ್ಲಿ ವೈದ್ಯರು ಅವರು ನಿಜವಾಗಿಯೂ ಜೀವಂತವಾಗಿದ್ದಾರೆ ಎಂದು ದೃಢಪಡಿಸಿದರು.ಮರುದಿನ ಬೆಳಗಿನ ಜಾವ ಪವಿತ್ರನ್ ಅವರು ಪ್ರಜ್ಞೆಗೆ ಮರಳಿದ್ದಾರೆ. ಕೆಲವು ಗಂಟೆಗಳ ಹಿಂದೆ ಮೃತಪಟ್ಟಿದ್ದಾರೆ ಎಂದು ನಂಬಲಾಗಿದ್ದ ಪವಿತ್ರನ್ ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದಿಸಲು ಪ್ರಾರಂಭಿಸಿದಾಗ ಕುಟುಂಬಕ್ಕೆ ನಂಬಲು ಅಸಾಧ್ಯವಾಗಿತ್ತು. ಪವಿತ್ರನ್ ಅವರನ್ನು ಮಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ಕುಟುಂಬಸ್ಥರೇ ಕೇಳಿಕೊಂಡಿದ್ದರು ಎಂದು ಆಸ್ಪತ್ರೆ ಮೂಲಗಳು ಸ್ಪಷ್ಟಪಡಿಸಿವೆ.-----------------