ಮಹಿಳೆಯ ಕೆನ್ನೆ ಕಚ್ಚಿ ಗಾಯಗೊಳಿಸಿದವಗೆ ಆರು ತಿಂಗಳ ಸಜೆ

| Published : Jun 30 2025, 01:47 AM IST

ಸಾರಾಂಶ

ಬೆಂಗಳೂರುರಾತ್ರಿ ವೇಳೆ ನಡೆದು ಹೋಗುತ್ತಿದ್ದ ಮಹಿಳೆಯ ಸೀರೆ ಎಳೆದು ಕೆನ್ನೆ ಕಚ್ಚಿ ಗಾಯಗೊಳಿಸಿದ್ದ ಪ್ರಕರಣದಲ್ಲಿ ಸಂತ್ರಸ್ತೆ ದೂರು ದಾಖಲಿಸಲು ವಿಳಂಬ ಮಾಡಿರುವುದನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕೆಂಬ ಆರೋಪಿಯ ವಾದ ತಿರಸ್ಕರಿಸಿರುವ ಹೈಕೋರ್ಟ್‌, ಗ್ರಾಮದಲ್ಲಿ ರಾತ್ರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ್ದಕ್ಕೆ ಘಟನೆ ನಡೆದ ತಕ್ಷಣವೇ ದೂರು ದಾಖಲಿಸಲಾಗಲಿಲ್ಲ ಎಂಬ ಸಂತ್ರಸ್ತೆಯ ವಿವರಣೆ ನ್ಯಾಯಸಮ್ಮತವಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಶಿಕ್ಷೆ ಕಾಯಂಗೊಳಿಸಿ ಆದೇಶಿಸಿದೆ.

ಕ್ರಿಮಿನಲ್‌ ಮೇಲ್ಮನವಿ ವಜಾ । ಸಂತ್ರಸ್ತೆಯ ವಿವರಣೆ ನ್ಯಾಯಸಮ್ಮತ । ನ್ಯಾ. ಎಂ.ಜಿ. ಉಮಾ ಅವರ ಪೀಠ ಆದೇಶ

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾತ್ರಿ ವೇಳೆ ನಡೆದು ಹೋಗುತ್ತಿದ್ದ ಮಹಿಳೆಯ ಸೀರೆ ಎಳೆದು ಕೆನ್ನೆ ಕಚ್ಚಿ ಗಾಯಗೊಳಿಸಿದ್ದ ಪ್ರಕರಣದಲ್ಲಿ ಸಂತ್ರಸ್ತೆ ದೂರು ದಾಖಲಿಸಲು ವಿಳಂಬ ಮಾಡಿರುವುದನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕೆಂಬ ಆರೋಪಿಯ ವಾದ ತಿರಸ್ಕರಿಸಿರುವ ಹೈಕೋರ್ಟ್‌, ಗ್ರಾಮದಲ್ಲಿ ರಾತ್ರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ್ದಕ್ಕೆ ಘಟನೆ ನಡೆದ ತಕ್ಷಣವೇ ದೂರು ದಾಖಲಿಸಲಾಗಲಿಲ್ಲ ಎಂಬ ಸಂತ್ರಸ್ತೆಯ ವಿವರಣೆ ನ್ಯಾಯಸಮ್ಮತವಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಶಿಕ್ಷೆ ಕಾಯಂಗೊಳಿಸಿ ಆದೇಶಿಸಿದೆ.

ಪ್ರಕರಣ ಸಂಬಂಧ ಅಧೀನ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆ ರದ್ದುಪಡಿಸುವಂತೆ ಕೋರಿ ಚಿಕ್ಕಮಗಳೂರು ನಿವಾಸಿ ಕುಮಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ಸಂತ್ರಸ್ತೆ ಒಂಟಿಯಾಗಿ ರಾತ್ರಿ 7.30ಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಆರೋಪಿ, ಆಕೆಯನ್ನು ಹಿಡಿದು ಕೆನ್ನೆಗಳನ್ನು ಕಚ್ಚಿದ್ದಾನೆ. ಖಾಸಗಿ ಭಾಗಗಳನ್ನು ಅದುಮಿದ್ದಾನೆ. ದೂರು ದಾಖಲಿಸಲು ಸಂತ್ರಸ್ತೆ ವಿಳಂಬ ಮಾಡಿರುವ ಅಂಶವನ್ನು ಆಧರಿಸಿ ಶಿಕ್ಷೆ ರದ್ದತಿಗೆ ಕೋರಿದ್ದಾನೆ. 2019ರ ಆ.18ರಂದು ರಾತ್ರಿ 7.30ಕ್ಕೆ ಘಟನೆ ನಡೆದಿದೆ. ಮರು ದಿನ ಆ.19ರಂದು ಬೆಳಗ್ಗೆ ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ತನ್ನ ಗ್ರಾಮದಲ್ಲಿ ರಾತ್ರಿ ವೇಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಘಟನೆ ಸಂಭವಿಸಿದ ಕೂಡಲೇ ಆಸ್ಪತ್ರೆ ಹಾಗೂ ಠಾಣೆಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಆಕೆ ವಿವರಣೆ ನೀಡಿದ್ದಾರೆ. ಈ ವಿವರಣೆ ನ್ಯಾಯಸಮ್ಮತವಾಗಿದ್ದು, ನಂಬಲು ಅರ್ಹವಾಗಿದೆ ಎಂದು ಪೀಠ ನುಡಿದಿದೆ.

ಘಟನೆ ನಡೆದ ಮರು ದಿನ ಬೆಳಗ್ಗೆ ವೈದ್ಯರು ಸಂತ್ರಸ್ತೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ ಸಂತ್ರಸ್ತೆಯ ಎರಡೂ ಕೆನ್ನೆಗಳ ಮೇಲೆ ಕಚ್ಚಿದ ಗಾಯದ ಗುರುತುಗಳಿದ್ದವು. ಕೆನ್ನೆಗಳು ಮತ್ತು ಕುತ್ತಿಗೆಯಲ್ಲಿ ನೋವು ಕಂಡು ಬರುತ್ತಿತ್ತು. ಈ ವಿಚಾರ ದೃಢೀಕರಿಸಿ ವೈದ್ಯರು ಪ್ರಮಾಣ ಪ್ರಮಾಣಪತ್ರ ನೀಡಿದ್ದಾರೆ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತೀರ್ಮಾನಿಸಿರುವ ಹೈಕೋರ್ಟ್‌, ಕುಮಾರ್‌ಗೆ ಶಿಕ್ಷೆ ಕಾಯಂಗೊಳಿಸಿದೆ.

ಪ್ರಕರಣದ ವಿವರ

ಸಂತ್ರಸ್ತೆ 2009ರ ಆ.18ರಂದು ರಾತ್ರಿ 7.30ರ ವೇಳೆ ಗ್ರಾಮದ ಕೆರೆಕಟ್ಟೆಯ ಸೇತುವೆ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಹಿಂದಿನಿಂದ ಬಂದ ಕುಮಾರ್‌, ಸಂತ್ರಸ್ತೆಯನ್ನು ಹಿಡಿದು ಅಸಭ್ಯವಾಗಿ ನಡೆದುಕೊಂಡಿದ್ದನು. ಘಟನೆ ಕುರಿತು ತನಿಖೆ ನಡೆಸಿದ್ದ ಚಿಕ್ಕಮಗಳೂರು ಗ್ರಾಮೀಣ ಪೊಲೀಸ್‌ ಠಾಣಾ ಪೊಲೀಸರು ಕುಮಾರ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಚಿಕ್ಕಮಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 323 (ಸ್ವಇಚ್ಛೆಯಿಂದ ಗಾಯ ಮಾಡಿದ) 504 (ಶಾಂತಿಭಂಗ ಉಂಟು ಮಾಡುವುದಕ್ಕೆ ಪ್ರಚೋದಿಸುವ ಉದ್ದೇಶದಿಂದ ಅವಮಾನಿಸುವುದು) 354 (ಮಹಿಳೆಯನ್ನು ವಿವಸ್ತ್ರಗೊಳಿಸುವ ಉದ್ದೇಶದಿಂದ ಆಕೆಯ ಮೇಲೆ ಹಲ್ಲೆ ಅಥವಾ ಬಲ ಪ್ರಯೋಗ ಮಾಡುವುದು) ಅಪರಾಧ ಅಡಿ ಕುಮಾರ್‌ನಿಗೆ ಎರಡು ತಿಂಗಳ ಸಾಧಾರಣಾ ಜೈಲು ಶಿಕ್ಷೆ ವಿಧಿಸಿತ್ತು.

ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂಬ ಸಂಗತಿ ಆರೋಪಿಗೆ ತಿಳಿದಿತ್ತು ಎಂದ ವಿಚಾರಣಾ ನ್ಯಾಯಾಲಯ, ಪರಿಶಿಷ್ಟ ಜಾತಿ ಅಥವಾ ಪಂಗಡಗಳಿಗೆ ಸೇರಿದ ಮಹಿಳೆ ಮೇಲೆ ಹಲ್ಲೆ ನಡೆಸಿ ಅವಮಾನಿಸುವ ಮೂಲಕ ಆಕೆಯ ಗೌರವಕ್ಕೆ ಧಕ್ಕೆತಂದ ಅಪರಾಧಕ್ಕೆ ಪರಿಶಿಷ್ಟ ಜಾತಿಗಳ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ-2015ರ ಸೆಕ್ಷನ್‌ 3(1)(11) ಅಡಿಯಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ 2013ರ ಜು.8ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕುಮಾರ್‌ ಹೈಕೋರ್ಟ್‌ಗೆ ಕ್ರಿಮಿಲ್‌ ಮೇಲ್ಮನವಿ ಸಲ್ಲಿಸಿದ್ದನು.

ಪ್ರಕರಣದ ಎಲ್ಲ ಸಾಕ್ಷ್ಯಧಾರ ಪರಿಶೀಲಿಸಿದ ಹೈಕೋರ್ಟ್‌, ಕುಮಾರ್‌ ಅಪರಾಧ ಎಸಗಿರುವುದು ಸತ್ಯ ಎಂದು ನಿರ್ಣಯಿಸಿದೆ.