ಚಾಕು ಇರಿತ, ಗಾಯಗೊಂಡ ವ್ಯಕ್ತಿ ಸಾವು: ಮತ್ತೆ ಆರು ಜನರ ಬಂಧನ

| Published : Jan 02 2025, 12:31 AM IST

ಸಾರಾಂಶ

ಚಾಕು ಇರಿತ ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೇ ಆರು ಜನರನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದೆ.

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಆನಂದ ನಗರದ ಘೋಡ್ಕೆ ಪ್ಲಾಟ್‌ನಲ್ಲಿ ಸೋಮವಾರ ರಾತ್ರಿ ನಡೆದಿದ್ದ ಚಾಕು ಇರಿತದಿಂದ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಸದೇ ಬುಧವಾರ ಮೃತಪಟ್ಟಿದ್ದಾನೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೇ ಆರು ಜನರನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದೆ.

ಮುಜಮಿಲ್ ಎಂಬುವನು ಕ್ಷುಲ್ಲಕ ಕಾರಣಕ್ಕೆ ಸಮೀರ್ ಶೇಖ್ (18) ಹಾಗೂ ಸಮೀರನ ಚಿಕ್ಕಪ್ಪ ಜಾವೇದ್ ಶೇಖ್ (32) ಎಂಬ ಇಬ್ಬರಿಗೂ ಚಾಕುವಿನಿಂದ ಇರಿದಿದ್ದನು. ನಂತರ ಇಬ್ಬರನ್ನೂ ಚಿಕಿತ್ಸೆಗಾಗಿ ಕೆಎಂಸಿಆರ್‌ಐಗೆ ದಾಖಲಿಸಲಾಗಿತ್ತು. ಆದರೆ, ಬುಧವಾರ ಚಿಕಿತ್ಸೆ ಫಲಿಸದೇ ಸಮೀರ್ ಶೇಖ್ (18) ಮೃತಪಟ್ಟಿದ್ದಾನೆ.

ಈ ಕುರಿತು ಸುದ್ದಿಗಾರರಿಗೆ ವಿವರಣೆ ನೀಡಿದ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮೀರ್ ಹಾಗೂ ಜಾವೀದ್ ಮೇಲೆ ಮುಜಮಿಲ್‌ ಹಾಗೂ ಸಹಚರರೊಂದಿಗೆ ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದನು. ಈತನನ್ನು ಬಂಧಿಸಲಾಗಿತ್ತು. ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಮುಜಮಿಲ್‌ ಮೇಲೆ ಗುಂಡು ಹಾರಿಸಲಾಗಿತ್ತು. ಈತನನ್ನು ಕೆಎಂಸಿ ಆರ್‌ಐಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಲು ಆರೋಪಿಗೆ ಸಹಕರಿಸಿದ್ದ ರಬ್ಬಾನಿ ಹಳೆಮನಿ, ಇಕ್ಬಾಲ್ ಹಳೆಮನಿ, ಖಾಲೀದ್ ಮುಲ್ಲಾ, ಮಹ್ಮದ್ ಶಾರುಖ್ ಮುಲ್ಲಾ, ಮಹ್ಮದ್ ಹನೀಫ್, ಅಹ್ಮದ್ ಸವಣೂರ ಎಂಬುವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಆರೋಪಿ ಮುಜಮಿಲ್ ಮೇಲೆ ಈಗಾಗಲೇ ಹಲವು ಪ್ರಕರಣಗಳಿವೆ. ನನ್ನ ಮಗನ ಮೇಲೆ 15 ಜನರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಸಮೀರ್‌ನ ತಂದೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿನ ದೃಶ್ಯಗಳನ್ನು ಕಲೆಹಾಕಲಾಗಿದೆ. ಬಂಧಿತರ ವಿಚಾರಣೆಯೂ ನಡೆಸಲಾಗುತ್ತಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ತಿಳಿಸಿದರು. ಈ ನಡುವೆ ಚಾಕು ಇರಿತದ ದೃಶ್ಯಗಳೆಲ್ಲ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.ಕ್ಷುಲ್ಲಕ ಕಾರಣ: ಯುವಕನೋರ್ವನಿಗೆ ಚಾಕು ಇರಿತ

ಹುಬ್ಬಳ್ಳಿ:

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದ ಪರಿಣಾಮ ಯುವಕನೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಅಯ್ಯೋಧ್ಯಾ ನಗರದಲ್ಲಿ ಬುಧವಾರ ಸಂಜೆ ನಡೆದಿದ್ದು, ಗಾಯಾಳುವನ್ನು ಕೆಎಂಸಿಆರ್‌ಐಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಯ್ಯೋಧ್ಯಾ ನಗರದ ಅಂಬೇಡ್ಕರ್ ಕಾಲನಿ ನಿವಾಸಿ ಮಾರುತಿ ನಾರಾಯಣಪುರ(25) ಎಂಬುವನಿಗೆ ಚಾಕುವಿನಿಂದ ಇರಿಯಲಾಗಿದೆ. ಬುಧವಾರ ಸಂಜೆ ಅಯೋಧ್ಯ ನಗರದ ವಾಟರ್ ಟ್ಯಾಂಕ್ ಬಳಿಯಲ್ಲಿ ಸಂಜೆ 6 ಗಂಟೆಯ ಸುಮಾರಿಗೆ 3-4 ಯುವಕರ ಗುಂಪು ದಾಳಿ ಮಾಡಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮಾರುತಿಯ ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕುವಿನಿಂದ ಇರಿಯಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿಪಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಗಾಯಾಳು ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದರು. ಹಣದ ವಿಚಾರವಾಗಿ ಹಲ್ಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.